ಕಾರ್ಕಳ ಜನವರಿ 24: ಖಾಸಗಿ ಬಸ್ ಚಾಲಕನ ಅತೀವೇಗಕ್ಕೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸಾವನಪ್ಪಿದವರ ಸಂಖ್ಯೆ 4 ಕ್ಕೆ ಏರಿಕೆಯಾಗಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೃತರನ್ನು ತೂಫನ್ ವಾಹನ ಚಾಲಕ ಮಣ್ಣಪ್ಪ, ಚೇತನ್(27), ರೋಹಿತ್(28) ಹಾಗೂ ಮಲ್ಲಮ್ಮ(50) ಎಂದು ಗುರುತಿಸಲಾಗಿದೆ. ಸಂಗೀತ (40), ಕವಿತಾ(38), ಬಸವರಾಜ್(56), ಕಿಶೋರ್(28), ಲಕ್ಷ್ಮೀ(25), ಜ್ಯೋತಿ(25), ಜಯಲಕ್ಷ್ಮೀ(24), ಎರಡು ವರ್ಷದ ಮಗು ಕುಶಲ್ ಸೇರಿದಂತೆ 9 ಮಂದಿ ಗಾಯಗೊಂಡಿದ್ದಾರೆ. ಇವರೆಲ್ಲ ಗುಲ್ಬರ್ಗ ಜಿಲ್ಲೆಯವರಾಗಿದ್ದಾರೆ ಎಂದು ತಿಳಿದುಬಂದಿದೆ.

ಶುಕ್ರವಾರ ಮಧ್ಯಾಹ್ನ ಖಾಸಗಿ ಬಸ್ ಹಾಗೂ ತೂಫಾನ್ ವಾಹನಗಳ ಮಧ್ಯೆ ಮಿಯಾರು ಗ್ರಾಮದ ಕಂಬಳಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿತ್ತು. ತೂಫಾನ್ ವಾಹನದಲ್ಲಿ ಒಂದು ಮಗು ಸೇರಿದಂತೆ 13 ಮಂದಿ ಪ್ರಯಾಣಿಸುತ್ತಿದ್ದು ಇವರಲ್ಲಿ ತೀವ್ರವಾಗಿ ಗಾಯ ಗೊಂಡ ಐದು ಮಂದಿ ಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಣ್ಣಪುಟ್ಟ ಗಾಯಗೊಂಡ ಮಗು ಅಪಾಯ ದಿಂದ ಪಾರಾಗಿದ್ದು, ಉಳಿದ ಗಾಯಾಳು ಗಳನ್ನು ಕಾರ್ಕಳದ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.