ಕಾರ್ಕಳ ಮೇ 06: ಕ್ಯಾನ್ಸರ್ ಹಾಗೂ ಪಾರ್ಶ್ವವಾಯು ಪೀಡಿತ ಪತ್ನಿಯ ಅನಾರೋಗ್ಯವನ್ನು ಆಯುರ್ವೇದ ಚಿಕಿತ್ಸೆಯ ಮೂಲಕ ಗುಣಪಡಿಸುವುದಾಗಿ ನಂಬಿಸಿ, ವೃದ್ಧರೊಬ್ಬರಿಂದ ಸುಮಾರು ₹12,09,160 ಹಣ ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ.

ಕಾರ್ಕಳದ ಬೆಳ್ಮಣ್ ಗ್ರಾಮದ ರೊನಾಲ್ಡ್ ರೋಡ್ರಿಗಸ್ (68) ಅವರು ತಮ್ಮ ಪತ್ನಿ ರೋಸಿ ಅವರ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ ಆಸ್ಪತ್ರೆಗೆ ತೆರಳಿದ್ದಾಗ ಸಿದ್ದಾರ್ಥ್ ಎಂಬ ವ್ಯಕ್ತಿಯ ಪರಿಚಯವಾಗಿತ್ತು. ತನ್ನ ತಾಯಿಯೂ ಇಂತಹದ್ದೇ ಕಾಯಿಲೆಯಿಂದ ಗುಣಮುಖರಾಗಿದ್ದಾರೆ ಎಂದು ನಂಬಿಸಿದ ಸಿದ್ದಾರ್ಥ್, ಚಿಕಿತ್ಸೆಯ ಆಮಿಷವೊಡ್ಡಿ ಮಾಧವ ಮತ್ತು ಅನಿಲ್ ಎಂಬುವವರನ್ನು ಪರಿಚಯಿಸಿದ್ದನು.
ಆರೋಪಿಗಳ ಮಾತು ನಂಬಿದ ರೊನಾಲ್ಡ್ ಅವರು ಗೂಗಲ್ ಪೇ ಮೂಲಕ ಅನಿಲ್ ಪವಾರ್ ಎಂಬ ಖಾತೆಗೆ ಹಣ ವರ್ಗಾಯಿಸಿದ್ದರು. ಅಲ್ಲದೆ, ಎಟಿಎಂನಿಂದ ₹40,000 ನಗದು ಪಡೆದು ಸಿದ್ದಾರ್ಥ್ಗೆ ನೀಡಿದ್ದರು. ಉಡುಪಿಯ ಮಾಂಡವಿ ಬಿಲ್ಡಿಂಗ್ನಲ್ಲಿರುವ ಆಯುರ್ವೇದ ಅಂಗಡಿಯೊಂದರಲ್ಲಿ ಚಿಕಿತ್ಸೆಯ ಬಗ್ಗೆ ಮಾತನಾಡಿದ ಆರೋಪಿಗಳು, ಔಷಧಿಗಾಗಿ ₹10,80,000 ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅದರಂತೆ ರೊನಾಲ್ಡ್ ಅವರು ತಮ್ಮ ಹೆಚ್.ಡಿ.ಎಫ್.ಸಿ. ಬ್ಯಾಂಕ್ನ ನಾಲ್ಕು ವಿವಿಧ ಚೆಕ್ಗಳ ಮೂಲಕ ಒಟ್ಟು ₹10,80,000 ಹಣವನ್ನು ಅನಿಲ್ ಎಂಬಾತನಿಗೆ ನೀಡಿದ್ದರು.
ಆರೋಪಿಗಳು ನೀಡಿದ ಔಷಧಿಗಳಿಂದ ಪತ್ನಿಯ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಅನುಮಾನಗೊಂಡು ರೊನಾಲ್ಡ್ ಅವರು ಆರೋಪಿಗಳ ಮೊಬೈಲ್ಗೆ ಕರೆ ಮಾಡಿದಾಗ ಅವು ಸ್ವಿಚ್ ಆಫ್ ಆಗಿರುವುದು ತಿಳಿದುಬಂದಿದೆ.
ತಮಗೆ ಒಟ್ಟು ₹12,09,160 ವಂಚಿಸಲಾಗಿದೆ ಎಂದು ರೊನಾಲ್ಡ್ ಅವರು ನೀಡಿದ ದೂರಿನ ಮೇರೆಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ZERO FIR (ಕ್ರಮಾಂಕ 01/2026) ದಾಖಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 318(2) ಮತ್ತು 318(4) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.