ಕಾಪು ಡಿಸೆಂಬರ್ 06: ಮನೆಗೆ ಬೀಗ ಹಾಕಿ ಬೀಕವನ್ನು ಮನೆಯ ಕರೆಂಟ್ ಮೀಟರ್ ಬಳಿ ಇಟ್ಟು ಮನೆ ಮಂದಿ ಹೊರಗೆ ಹೋದರೆ ಇತ್ತ ಕಳ್ಳ ಅದೇ ಕೀಯನ್ನು ಬಳಸಿ ಮನೆಯೊಳಗೆ ನುಗ್ಗಿ 4 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಕಾಪುವಿನಲ್ಲಿ ನಡೆದಿದೆ.

ಕಾಪುವಿನ ಮಲ್ಲಾರು ಗ್ರಾಮದ ರಾಘವೇಂದ್ರ ಕಿಣಿ ಎಂಬವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ರಾಘವೇಂದ್ರ ಕಿಣಿ ಯವರು 04.12.2025 ರಂದು ಬೆಳಿಗ್ಗೆ ಕೆಲಸಕ್ಕೆ ಹೋಗುವ ಸಮಯದಲ್ಲಿ ತಾಯಿಯವರನ್ನು ತಮ್ಮ ಅಕ್ಕನ ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಹೋಗಿದ್ದಾರೆ. ಬಳಿಕ ಅವರ ಪತ್ನಿ ಮಕ್ಕಳ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮಕ್ಕೆ ಹೋಗುವ ಸಲುವಾಗಿ ಬೆಳಿಗ್ಗೆ 9.45 ಗಂಟೆಗೆ ಮನೆಯನ್ನು ಹೊರಗಿನಿಂದ ಬೀಗ ಹಾಕಿ ಕೀ ಯನ್ನು ಮನೆಯ ವಿದ್ಯತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿ ಹೋಗಿದ್ದಾರೆ.
ಇದೇ ವೇಳೆ ಬಂದ ಕಳ್ಳರು ಮನೆಯ ವಿದ್ಯುತ್ ಮೀಟರ್ ನ ಬಾಕ್ಸ್ ನಲ್ಲಿ ಇರಿಸಿದ್ದ ಕೀ ಇಂದ ಮನೆಯ ಎದುರಿನ ಬಾಗಿಲನ್ನು ತೆರೆದು ಒಳಗಿನಿಂದ ಲಾಕ್ ಮಾಡಿಕೊಂಡು ಮನೆಯಲ್ಲಿದ್ದ ಸುಮಾರು ರೂಪಾಯಿ 3,90,000/- ಮೌಲ್ಯದ ಸುಮಾರು 72 ಗ್ರಾಂ ತೂಕದ ಚಿನ್ನದ ಒಡವೆಗಳು ಹಾಗೂ ಸುಮಾರು 1,500/- ಮೌಲ್ಯದ ಬೆಳ್ಳಿ ವಸ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



