ಕಾಪು, ಮಾರ್ಚ್ 10: ಮದ್ಯದ ಅಮಲಿನಲ್ಲಿ ನಡೆದ ಸಣ್ಣ ಗಲಾಟೆ ಮಹಿಳೆಯೊಬ್ಬರ ಕೊಲೆಯಲ್ಲಿ ಅಂತ್ಯವಾದ ಘಟನೆ ಉಡುಪಿ ತಾಲೂಕಿನ ಮಣಿಪುರ ಗ್ರಾಮದ ಕೆನರಾಡಿಯಲ್ಲಿ ನಡೆದಿದ್ದು, ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಕೊಲೆಗೀಡಾದವರನ್ನು ಕೆನರಾಡಿಯ ವನಜಾ ಪೂಜಾರ್ತಿ(60) ಎಂದು ಗುರುತಿಸಲಾಗಿದೆ. ಕೊಲೆ ಆರೋಪಿಗಳಾದ ಸ್ಥಳೀಯ ನಿವಾಸಿ ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಲೇರಿಯನ್ ಮೆಂಡೊನ್ಸಾ ಮತ್ತು ಪ್ರವೀಣ್ ಮೆಂಡೊನ್ಸಾ ಅಣ್ಣ ತಮ್ಮಂದಿರ ಮಕ್ಕಳಾಗಿದ್ದು, ವನಜಾ ಪೂಜಾರ್ತಿ ಜೊತೆ ಆಗಾಗ್ಗೆ ವಲೇರಿಯನ್ ಮೆಂಡೊನ್ಸಾ ಅವರ ಮನೆಯಲ್ಲಿ ಮದ್ಯ ಸೇವನೆ ಮಾಡು ತ್ತಿದ್ದರು. ಮಾರ್ಚ್ 9ರಂದು ಸಂಜೆ ವೇಳೆ ಕ್ಷುಲ್ಲಕ ಕಾರಣಕ್ಕಾಗಿ ಇವರಿಬ್ಬರು ವನಜಾ ಪೂಜಾರ್ತಿ ಅವರನ್ನು ಹರಿತವಾದ ಆಯುಧದಿಂದ ಕೊಲೆ ಮಾಡಿರುವುದಾಗಿ ದೂರಲಾಗಿದೆ.
ಈ ಘಟನೆ ಇಂದು ಬೆಳಿಗ್ಗೆ 7ಗಂಟೆಗೆ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.