ಕಾನ್ಪುರ,ಫೆಬ್ರವರಿ 12: ನಗರದ ವಿಐಪಿ ರಸ್ತೆಯಲ್ಲಿ ನಡೆದ ಭೀಕರ ಲ್ಯಾಂಬೋರ್ಗಿನಿ ಕಾರು ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ತಂಬಾಕು ಉದ್ಯಮಿಯ ಪುತ್ರನನ್ನು ಫೆ.12 ರಂದು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಶಿವಂ ಮಿಶ್ರಾ ಉತ್ತರ ಪ್ರದೇಶದ ಪ್ರಖ್ಯಾತ ತಂಬಾಕು ಉದ್ಯಮಿ ಮತ್ತು ‘ಡಿಎಸ್ ಗ್ರೂಪ್’ ಮಾಲೀಕ ಕೆ.ಕೆ. ಮಿಶ್ರಾ ಅವರ ಪುತ್ರನಾಗಿದ್ದು ಇವರು ಕಾನ್ಪುರ ಮೂಲದ ಪ್ರಬಲ ಉದ್ಯಮಿ ಕುಟುಂಬಕ್ಕೆ ಸೇರಿದವರು ಎಂಬ ಮಾಹಿತಿ ಲಭ್ಯವಾಗಿದೆ.
ಸುಮಾರು 10 ಕೋಟಿ ರೂಪಾಯಿಗಿಂತ ಹೆಚ್ಚು ಬೆಲೆಯ ಐಷಾರಾಮಿ ಇಟಾಲಿಯನ್ ಸ್ಪೋರ್ಟ್ಸ್ ಕಾರು ಲ್ಯಾಂಬೋರ್ಘಿನಿ ರೆವೆಲ್ಟೊ ಕಾರು ಇದಾಗಿದ್ದು, ಭಾರತದಲ್ಲಿ ಇದರ ಆನ್-ರೋಡ್ ಬೆಲೆ ಸುಮಾರು 10 ಕೋಟಿ ರೂಪಾಯಿಯಿಂದ 11 ಕೋಟಿ ರೂಪಾಯಿ ವರೆಗಿದೆ. ಈ ಕಾರು ಅತ್ಯಂತ ವೇಗವಾಗಿ ಚಲಿಸುವ ಸಾಮರ್ಥ್ಯ ಕೂಡ ಹೊಂದಿದೆ.

ಕಳೆದ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಾನ್ಪುರದ ವಿಐಪಿ ರಸ್ತೆಯಲ್ಲಿ ಶಿವಂ ಮಿಶ್ರಾ ಅತಿ ವೇಗವಾಗಿ ಕಾರು ಚಲಾಯಿಸುತ್ತಿದ್ದ ಎನ್ನಲಾಗಿದ್ದು ಈ ವೇಳೆ ನಿಯಂತ್ರಣ ತಪ್ಪಿದ ಕಾರು ರಸ್ತೆ ಬದಿಯ ಪಾದಚಾರಿಗಳಿಗೆ ಮತ್ತು ಇತರ ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗಿರುವ ಬಗ್ಗೆಯೂ ವರದಿಯಾಗಿದೆ.
ಬಳಿಕ ಈ ಅಪಘಾತದಲ್ಲಿ ಗಾಯಗೊಂಡವರಲ್ಲಿ ಒಬ್ಬರಾದ ಇ-ರಿಕ್ಷಾ ಚಾಲಕ ಮೊಹಮ್ಮದ್ ತೌಫೀಕ್ ಎಂಬವರು ಎಫ್‌ಐಆರ್ ನ್ನು ದಾಖಲಿಸಿದ್ದರು. 35 ವರ್ಷದ ಶಿವಂ ಅವರನ್ನು ಕಾನ್ಪುರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು, ನ್ಯಾಯಾಲಯವು ಅವರನ್ನು ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಇತ್ತ ಅಪಘಾತ ನಡೆದ ತಕ್ಷಣ ಶಿವಂ ಮಿಶ್ರಾ ಸ್ಥಳದಿಂದ ಪರಾರಿಯಾಗಿದ್ದ. ನಂತರ ಆತ ಆಸ್ಪತ್ರೆಗೆ ದಾಖಲಾಗಿದ್ದ ಎಂದು ತಿಳಿದುಬಂದಿದೆ. ಪೊಲೀಸರು ತೀವ್ರ ಶೋಧ ನಡೆಸಿದ ಪೊಲೀಸರು ಬರೋಬ್ಬರಿ ನಾಲ್ಕು ದಿನಗಳ ನಂತರ ಶಿವಂ ಮಿಶ್ರಾನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಪಘಾತದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಪೊಲೀಸರು ಉದ್ಯಮಿಯ ಪುತ್ರನ ಮೇಲೆ ಮೃದು ಧೋರಣೆ ತೋರುತ್ತಿದ್ದಾರೆ ಎಂಬ ಟೀಕೆಗಳೂ ಕೇಳಿಬಂದಿದ್ದವು.



