DAKSHINA KANNADA
ಲಾಕ್ ಡೌನ್ ಸಂದರ್ಭ ಕನ್ನಡ ಕಲಿತ ಫ್ರಾನ್ಸ್ ಪ್ರಜೆ

ಪುತ್ತೂರು ಜುಲೈ 11: ಸಾದಾ ಟಸ್ ಠುಸ್ ಇಂಗ್ಲಿಷ್ ಮತ್ತು ಫ್ರೆಂಚ್ ಭಾಷೆ ಹೊರಡುತ್ತಿದ್ದ ಬಾಯಲ್ಲೀಗ ಅಚ್ಚ ಕನ್ನಡದ ಪದಗಳು ಹೊರಹೊಮ್ಮುತ್ತಿದೆ. ಹೌದು ಇದು ದಕ್ಷಿಣಕನ್ನಡ ಜಿಲ್ಲೆಯ ಪ್ರಕೃತಿಯ ಸೊಬಗು ಸವಿಯಲು ಬಂದ ಪ್ರಾನ್ಸ್ ಪ್ರಜೆಯ ಕನ್ನಡದ ಕರಾಮತ್ತು. ಕೇವಲ ತಾನು ಕಲಿಯುವುದು ಮಾತ್ರವಲ್ಲದೆ, ತನ್ನ ಮನೆ ಪಕ್ಕದ ಮಕ್ಕಳಿಗೆ ಚಿತ್ರಕಲೆ ಮತ್ತು ಡ್ರಮ್ಸ್ ಬಾರಿಸುವುದನ್ನು ಕಲಿಸುವ ಮೂಲಕ ಕೊಡು ಕೊಳ್ಳುವಿಕೆಯಲ್ಲೂ ತೊಡಗಿಕೊಂಡಿದ್ದಾರೆ. ಚಾರ್ಮಾಡಿ ಘಾಟಿ, ದಿದುಪೆಯ ಜಲಪಾತಗಳು, ಪ್ರಕೃತಿಯ ಸೌಂದರ್ಯ ಸವಿಯಲು 2017 ರಿಂದ ಪ್ರತೀ ವರ್ಷವೂ ದಕ್ಷಿಣಕನ್ನಡ ಜಿಲ್ಲೆಗೆ ಬರುತ್ತಿರುವ ಫ್ರಾನ್ಸ್‌ನ ಯುವಕ ಈ ಬಾರಿ ಲಾಕ್‌ಡೌನ್‌ನ ಲಾಭ ಪಡೆದು ಕನ್ನಡ ಕಲಿತಿದ್ದಾರೆ.
ಬ್ಯಾಪ್ಟಿಸ್ಟ್ ಮ್ಯಾರಿಯೋಟ್ ಹೆಸರಿನ ಈತ ಒಂದು ವರ್ಷದ ಪ್ರವಾಸಿ ವೀಸಾದಲ್ಲಿ ಈ ಬಾರಿ ಭಾರತಕ್ಕೆ ಬಂದಿದ್ದ. ಬಾಪ್ಟಿಸ್ಟ್ ವೀಸಾ ಅವಧಿ ಮಾರ್ಚ್ ಕೊನೆವರೆಗೆ ಇದ್ದ ಕಾರಣ ಮಾರ್ಚ್ 25 ರ ಬಳಿಕ ತನ್ನ ದೇಶಕ್ಕೆ ಮರಳಲು ತಯಾರಿ ನಡೆಸಿದ್ದ. ಆದರೆ ಈ ನಡುವೆ ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಘೋಷಣೆ ಹಾಗೂ ಅಂತಾರಾಷ್ಟ್ರೀಯ ವಿಮಾನಗಳು ರದ್ದಾದ ಕಾರಣ ಈತ ಬೆಳ್ತಂಗಡಿ ತಾಲೂಕಿನ ಮುಂಡಾಜೆ ಎನ್ನುವ ಗ್ರಾಮದಲ್ಲೇ ಉಳಿಯುವಂತಾಯಿತು. ಲಾಕ್‌ಡೌನ್ ಸಮಯ ಯಾವುದೇ ತಿರುಗಾಟ ನಡೆಸಲು ನಿರ್ಬಂಧವಿದ್ದ ಕಾರಣ ಕನ್ನಡ ಕಲಿಯುವ ಆಸಕ್ತಿ ಬ್ಯಾಪ್ಟಿಸ್ಟ್ ನಲ್ಲಿ ಉಂಟಾಯಿತು.

ಬ್ಯಾಪ್ಟಿಸ್ಟ್ ಗೆ ಮುಂಡಾಜೆಯವರೇ ಆದ ಅಜಿತ್ ಭಿಡೆ ಎನ್ನುವ ವ್ಯಕ್ತಿಯ ಪರಿಚಯ ಈ ಹಿಂದೆಯೇ ಇದ್ದ ಕಾರಣ ಅವರಿಂದ ಒಂದಿಷ್ಟು ಹಿಂದಿ ಕಲಿತದ್ದು ಬಿಟ್ಟರೆ ಭಾರತದ ಯಾವುದೇ ಭಾಷೆಗಳ ಅರಿವು ಇರಲಿಲ್ಲ. ಆದರೆ ಅಜಿತ್ ಭಿಡೆ ಅಕಾಲಿಕವಾಗಿ ಸಾವನ್ನಪ್ಪಿದ ಕಾರಣ ಕನ್ನಡ ಕಲಿಯಲು ಹೊಸ ಗುರುವನ್ನು ಹುಡುಕುತ್ತಿದ್ದ ಸಮಯದಲ್ಲಿ ಮಂಡಾಜೆಯ ಹವ್ಯಾಸಿ ಚಾರಣಿಗ ಸಚಿನ್ ಮುಂಡಾಜೆ ಗೆಳೆತನವಾಯಿತು. ತನ್ನ ಕನ್ನಡ ಕಲಿಕೆಯ ಇಚ್ಛೆಯನ್ನು ಸಚಿನ್ ಬಳಿ ತಿಳಿಸಿದ ತಕ್ಷಣ ಒಪ್ಪಿಗೆಯೂ ಸಿಕ್ಕಿತ್ತು. ವಾರಕ್ಕೆ 5 ದಿನ ಸಂಜೆ 5 ರಿಂದ 8 ರವರೆಗೆ ಕನ್ನಡ ಮಾತಾಡುವ ಬಗ್ಗೆ ಬೋಧನೆ ಆರಂಭಗೊಂಡಿತ್ತು .
ಮಾರ್ಚ್ ಕೊನೆಯಿಂದ ಜೂನ್ ಕೊನೆತನಕದ ಪಾಠದಿಂದ ಬ್ಯಾಪ್ಟಿಸ್ಟ್ ಈಗ ಸರಾಗವಾಗಿ ಕನ್ನಡ ಮಾತನಾಡಲು ಕಲಿತಿದ್ದಾರೆ. ಈಗ ಯಾರೂ ಸಿಕ್ಕರೂ ಅವರೇ ಕರೆದು ಕನ್ನಡದಲ್ಲಿ ಮಾತನಾಡುತ್ತಾರೆ. ಜತೆಗೆ ಅಕ್ಷರಾಭ್ಯಾಸವೂ ನಡೆದಿದ್ದು ಕನ್ನಡ ಓದುವಷ್ಟು ಜಾಣರಾಗಿದ್ದಾರೆ. ಸದ್ಯ ಈಗ ಕನ್ನಡ ವ್ಯಾಕರಣ ಪಾಠ ನಡೆಯುತ್ತಿದೆ. ತನ್ನ ದೇಶಕ್ಕೆ ಹೋಗಲು ವಿಮಾನ ಆರಂಭವಾಗುವವರೆಗೆ ಕನ್ನಡ ಕಲಿಕೆ ನಿರಂತರ ನಡೆಯಲಿದೆ.
ವಿದೇಶಿ ಪ್ರಜೆಯೊಬ್ಬನ ಕನ್ನಡ ಕಲಿಕೆಯ ಉತ್ಸಾಹ ನಿಜಕ್ಕೂ ಸಂತೋಷ ಉಂಟುಮಾಡಿದೆ, ಈಗ ಉತ್ತಮವಾಗಿ ಕನ್ನಡ ಮಾತಾಡುವ ಬ್ಯಾಪ್ಟಿಸ್ಟ್‌ಗೆ ವ್ಯಾಕರಣ ಪಾಠ ನಡೆಯುತ್ತಿದೆ. ಮುಂದೆ ತುಳು ಭಾಷೆಯನ್ನೂ ಕಲಿಯುವ ಇಚ್ಛೆಯಿದೆ. ಕೇವಲ ಕಲಿಯುವುದು ಮಾತ್ರವಲ್ಲದೆ, ಇತರರಿಗೆ ತನ್ನಲ್ಲಿರುವ ಕಲೆಯನ್ನು ಕಲಿಸುವ ಒಳ್ಳೆಯ ಮನಸ್ಸೂ ಈತನಲ್ಲಿದೆ.
ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲೇ ಕೂತು ವಿಧ-ವಿಧದ ಖಾಧ್ಯ ಮಾಡಿ ತಿಂದವರೇ ಹೆಚ್ಚು. ಈ ನಡುವೆ ಬ್ಯಾಪ್ಟಿಸ್ಟ್ ಸಿಕ್ಕಿದ ಸಮಯವನ್ನು ವ್ಯರ್ಥ ಮಾಡದೆ ಕನ್ನಡದ ಕಂಪನ್ನು ಅರಿಯಲು ಉಪಯೋಗಿಸಿದ್ದು, ಶ್ಲಾಘನೆಗೂ ಪಾತ್ರವಾಗಿದೆ.