ಮಂಗಳೂರು ಜನವರಿ 04: ಕರಾವಳಿಯಲ್ಲಿ ಕೋಳಿ ಅಂಕ ಭಾರಿ ವಿವಾದಕ್ಕೆ ಕಾರಣವಾಗಿದೆ. ಸಾಂಪ್ರದಾಯಿಕವಾಗಿ ನಡೆಯುವ ಕೋಳಿ ಅಂಕಗಳಿಗೆ ಪೊಲೀಸರು ಅನುಮತಿ ನಿರಾಕರಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ವಿಟ್ಲದಲ್ಲಿ ವಿವಾದಕ್ಕೆ ಕಾರಣವಾಗಿದ್ದ ಕೋಳಿ ಅಂಕ, ಇದೀಗ ಮಂಗಳೂರಿನಲ್ಲೂ ನಡೆಯುವ ಲಕ್ಷಣ ಕಾಣಿಸಿದ್ದು, ಇತಿಹಾಸ ಪ್ರಸಿದ್ದ ಕಂಕನಾಡಿಯ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕ್ಷೇತ್ರದ ವರ್ಷಾವಧಿ ಉತ್ಸವದ ಸಂದರ್ಭ ಆಯೋಜಿಸಲಾಗುತ್ತಿದ್ದಸಾಂಪ್ರದಾಯಿಕ ಕೋಳಿ ಅಂಕ ನಡೆಸಲಪ ಪೊಲೀಸರ ಷರತ್ತು ವಿಧಿಸಿದ್ದು,ಈ ಹಿನ್ನಲೆ ಈ ಬಾರಿ ಕೋಳಿ ಅಂಕ ನಡೆಸದಿರಲು ಆಡಳಿತ ಮಂಡಳಿ ತೀರ್ಮಾನಿಸಿದೆ ಎಂದು ವರದಿಯಾಗಿದೆ.

ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ, 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ, ಮನವರಿಕೆ ಮಾಡಿದರೂ ಪೊಲೀಸರು ಒಪ್ಪಿಲ್ಲ. ಅಲ್ಲದೆ ಷರತ್ತುಬದ್ದವಾಗಿ ಸಮಯದ ಮಿತಿಯಲ್ಲಿ ನಡೆಸುವುದಾದರೇ ಮಾತ್ರ ಅನುಮತಿ ನೀಡಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ – ಕಂಬಳ ಭೀಷ್ಮ ಗುಣಪಾಲ ಕಡಂಬರಿಗೆ ಅವಮಾನ ಪ್ರಕರಣ – ಮಿಯ್ಯಾರು ಕಂಬಳದಲ್ಲಿ ಮುಚ್ಚೂರು ಲೋಕೇಶ್ ಶೆಟ್ಟಿ ಕ್ಷಮೆಯಾಚನೆ
ಉದಯವಾಣಿ ಜೊತೆ ಮಾತನಾಡಿರುವ ಕ್ಷೇತ್ರದ ಅಧ್ಯಕ್ಷ ಚಿತ್ತರಂಜನ್ ಇನ್ನು ಕೋಳಿ ಅಂಕ ನಡೆಸಲು ಪೊಲೀಸರು ಷರತ್ತು ವಿಧಿಸಿದ್ದು, ಕೋಳಿ ಅಂಕ ನಡೆಯುವ ಸ್ಥಳದಲ್ಲಿ ಪೊಲೀಸ್ ಕಾವಲನ್ನೂ ಹಾಕಿದ್ದಾರೆ. ಕಳೆದ ಒಂದೂವರೆ ಶತಮಾನದಲ್ಲಿ ಈ ರೀತಿಯ ಪರಿಸ್ಥಿತಿ ಎಂದೂ ಬಂದಿರಲಿಲ್ಲ. ಪೊಲೀಸರ ಕಾವಲಿನಲ್ಲಿ ನಡೆಸುವುದಕ್ಕಿಂತ ನಡೆಸದಿರುವುದೇ ಉತ್ತಮ ಎಂದು ನಿರ್ಧರಿಸಿದ್ದೇವೆ ಎಂದು ಹೇಳಿದ್ದಾರೆ.
ಉತ್ಸವ ಆರಂಭದಿಂದ ಸುಮಾರು 5 ದಿನಗಳ ಕಾಲ ಪ್ರತಿ ನಿತ್ಯ ಕ್ಷೇತ್ರದ ಪಕ್ಕದಲ್ಲೇ ಕೋಳಿ ಅಂಕ ನಡೆಯುತ್ತಿತ್ತು. ಸುಮಾರು 7 ಗ್ರಾಮಗಳ ಜನರು ದೇವರ ಕೋಳಿ ಅಂಕಕ್ಕೆ ಎಂದೇ ಕೋಳಿ ಸಾಕಿ ಅಂಕಕ್ಕೆ ತರುತ್ತಿದ್ದರು. ಬೆಳಗ್ಗಿನಿಂದ ಸಂಜೆ ವರೆಗೆ ನಾವೇ ಸಮಯ ನೀಡಿ ಅದರೊಳಗೆ ಮುಗಿಸುತ್ತಿದ್ದೆವು. ಇಲ್ಲಿ ಯಾವುದೇ ಜೂಜಿಗೆ ಅವಕಾಶವಿಲ್ಲ. ಆದರೂ ಕೋಳಿ ಅಂಕಕ್ಕೆ ತಡೆ ಒಡ್ಡಿರುವುದು ಖೇದಕರ ಎಂದು ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರೊಬ್ಬರು ತಿಳಿಸಿದ್ದಾರೆ.

ನಗರ ಪೊಲೀಸ್ ಆಯುಕ್ತ ಸುಧೀರ್‌ಕುಮಾರ್‌ರೆಡ್ಡಿ ಅವರು ಪ್ರತಿಕ್ರಿಯೆ ನೀಡಿ, ಕ್ಷೇತ್ರದ ಸಂಪ್ರದಾಯದ ಪ್ರಕಾರ ಪ್ರತಿವರ್ಷ ಕೋಳಿ ಅಂಕ ನಡೆಯುತ್ತಿದ್ದು, ಅದಕ್ಕೆ ಅವಕಾಶ ಕೊಡಿ ಎಂದು ಆಡಳಿತ ಮಂಡಳಿಯವರು ಕೇಳಿದ್ದರು. ಅವಕಾಶ ಕೊಡಲು ಇಲಾಖೆ ಸಿದ್ಧವಿದೆ. ಆದರೆ ಸೀಮಿತ ಅವಧಿಯಲ್ಲಿ, ಸೂಕ್ತ ಮೇಲ್ವಿಚಾರಣೆಯಲ್ಲಿ, ಯಾವುದೇ ರೀತಿಯ ಜೂಜಿಗೆ ಅವಕಾಶ ಇಲ್ಲದಂತೆ ಆಯೋಜಿಸುವಂತೆ ಸೂಚಿಸಿದ್ದೇವೆ. ಜೂಜಾಟ ಕಂಡು ಬಂದಲ್ಲಿ ಪ್ರಕರಣ ದಾಖಲಿಸುವುದಾಗಿಯೂ ತಿಳಿಸಿದ್ದೇವೆ ಎಂದರು.
ಇದನ್ನೂ ಓದಿ –ಮಂಗಳೂರು ಬೆಂಗಳೂರು ಕೆಎಸ್ಆರ್ ಟಿಸಿ ಬಸ್ ನಲ್ಲಿ ಟಿಕೆಟ್ ದರದ ಮೇಲೆ ಡಿಸ್ಕೌಂಟ್
ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭಯ ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ.



