ಕಲಬುರಗಿ, ಮಾರ್ಚ್ 25: ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯ ಆರ್ಭಟಕ್ಕೆ ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ಶಾದಿಪುರ ತಾಂಡಾದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಜಮೀನಿನಲ್ಲಿ ಕಬ್ಬು ನಾಟಿ ಮಾಡುತ್ತಿದ್ದ ಯುವ ರೈತ ಮಹೇಶ್ ಚೌವ್ಹಾಣ್ (24), ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಕಳೆದ ಕೆಲವು ದಿನಗಳಿಂದ ಜಿಲ್ಲೆಯಲ್ಲಿ ಬಿಸಿಲಿನ ಬೇಗೆ ಹೆಚ್ಚಾಗಿದ್ದು ಮಂಗಳವಾರ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿ ಮಳೆ ಆರಂಭವಾಯಿತು. ಈ ಸಮಯದಲ್ಲಿ ಮಹೇಶ್ ಅವರು ತಮ್ಮ ಜಮೀನಿನಲ್ಲಿ ಕಬ್ಬಿನ ಸಸಿಗಳನ್ನು ನಾಟಿ ಮಾಡುವ ಕೆಲಸದಲ್ಲಿ ಮಗ್ನರಾಗಿದ್ದರು. ಕೆಲಸ ಮುಗಿಸಿ ಮನೆಗೆ ಮರಳುವಷ್ಟರಲ್ಲಿ ಪ್ರಬಲವಾಗಿ ಅಪ್ಪಳಿಸಿದ ಸಿಡಿಲಿನ ತೀವ್ರತೆಗೆ ಯುವ ರೈತ ಬಲಿಯಾಗಿದ್ದಾರೆ.
ಘಟನೆ ನಡೆದ ವಿಷಯ ತಿಳಿಯುತ್ತಿದ್ದಂತೆಯೇ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ದುರ್ಘಟನೆಗೆ ಸಂಬಂಧಿಸಿದಂತೆ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.