ಕಲಬುರಗಿ , ಏಪ್ರಿಲ್ 01: ನಗರದ ಇಂದಿರಾ ಸ್ಮಾರಕ ಭವನದಲ್ಲಿ (ಟೌನ್ ಹಾಲ್) ನಡೆದ ಮಹಾನಗರ ಪಾಲಿಕೆಯ 2026-27ನೇ ಸಾಲಿನ ಬಜೆಟ್ ಮಂಡನೆ ಸಭೆಯು ಅನಿರೀಕ್ಷಿತ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಯಿತು. ಆರ್ಥಿಕ ವರ್ಷದ ಆಯವ್ಯಯ ಮಂಡನೆಗೂ ಮುನ್ನ, ಇರಾನ್ನ ಪರಮೋಚ್ಚ ನಾಯಕ ಅಯೊತೊಲ್ಲಾ ಅಲಿ ಖಮೇನಿ ಅವರ ಹತ್ಯೆಗೆ ಸಂತಾಪ ಸೂಚಿಸುವ ನಿರ್ಣಯ ಮಂಡಿಸಿ, ಮೌನ ಆಚರಿಸಲಾಯಿತು.

ಮಾರ್ಚ್ 31ರಂದು ನಡೆದ ಈ ವಿಶೇಷ ತುರ್ತು ಸಭೆ ಆರಂಭವಾಗುತ್ತಿದ್ದಂತೆಯೇ, ವಾರ್ಡ್ ನಂಬರ್ 24ರ ಸದಸ್ಯೆ ಸಯೀದಾ ನೂರ್ ಫಾತೀಮಾ ಜೈದಿ ಅವರು ಇರಾನ್ ನಾಯಕ ಅಯೊತೊಲ್ಲಾ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಸಂತಾಪ ಸೂಚಕ ಪ್ರಸ್ತಾವನೆ ಮಂಡಿಸಿದರು. ಈ ನಿರ್ಣಯಕ್ಕೆ ಸಭೆಯಲ್ಲಿ ಸಹಮತ ವ್ಯಕ್ತವಾದ ಹಿನ್ನೆಲೆಯಲ್ಲಿ, ಮೇಯರ್, ಉಪಮೇಯರ್ ಹಾಗೂ ಪಾಲಿಕೆಯ ಸದಸ್ಯರೆಲ್ಲರೂ ಎದ್ದು ನಿಂತು ಎರಡು ನಿಮಿಷಗಳ ಕಾಲ ಮೌನ ಆಚರಿಸುವ ಮೂಲಕ ಗೌರವ ಸಲ್ಲಿಸಿದರು. ಅಂತರಾಷ್ಟ್ರೀಯ ನಾಯಕನೊಬ್ಬನ ಹತ್ಯೆಗೆ ಸ್ಥಳೀಯ ಸಂಸ್ಥೆಯ ಬಜೆಟ್ ಸಭೆಯಲ್ಲಿ ಸಂತಾಪ ಸೂಚಿಸಿದ್ದು ವಿಶೇಷವಾಗಿತ್ತು.