ಉಡುಪಿ ಡಿಸೆಂಬರ್ 15: ಬೆಳಗಾವಿ ಅಧಿವೇಶನದಲ್ಲಿ ಸ್ಪೀಕರ್ ಖಾದರ್ ಟೀಕಿಸಿರುವದಕ್ಕೆ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದು, ಈ ಅಧಿವೇಶನದಲ್ಲಿ ಯಾರಿಗೆ ಚಳಿ ಬಿಡಿಸಬೇಕು ಎಂಬುದು ನಮಗೆ ಗೊತ್ತಿದೆ. ಖಾದರ್ ಓಲೈಕೆ ರಾಜಕೀಯ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾದರೆ ಸಚಿವ ಸ್ಥಾನ ಪಡೆಯುವ ಆಕಾಂಕ್ಷೆಯಲ್ಲಿದ್ದಾರೆ. ಹಿಂದುತ್ವದ ಬಗ್ಗೆ ಮಾತನಾಡುವ ಶಾಸಕರನ್ನು ಟೀಕಿಸಿದರೆ ಹೈಕಮಾಂಡ್ ಗಮನ ಸೆಳೆಯಬಹುದು ಎಂಬ ಉದ್ದೇಶದಿಂದ ಈ ರೀತಿ ವರ್ತಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅರು ಅಧಿವೇಶನದಲ್ಲಿ ಉಡುಪಿ ಪರ್ಯಾಯಕ್ಕೆ ಅನುದಾನ ಕೇಳಿದ್ದಕ್ಕಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಪೀಠದಿಂದ ಟೀಕಿಸಿರುವುದು ಸರಿಯಲ್ಲ. ಪೀಠಕ್ಕೆ ಗೌರವ ನೀಡಿ ನಾನು ಮೌನವಾಗಿದ್ದೆ. ಆದರೆ ಸ್ಪೀಕರ್ ಅವರು ಹಗುರವಾಗಿ, ಹಿಂದೂ ಧರ್ಮದ ಹರಿಕಥೆ ಬಗ್ಗೆ ಮಾತನಾಡಿದ್ದು ನೋವುಂಟು ಮಾಡಿದೆ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ತಿಳಿಸಿದ್ದಾರೆ.
ನಾನು ಕಾರ್ಯಕರ್ತನಾಗಿ ಬೆಳೆದು ಶಾಸಕನಾಗಿದ್ದೇನೆ. ತಂದೆಯ ಹೆಸರಲ್ಲಿ ಮತ ಕೇಳಿ ಅವರು ಶಾಸಕರಾದವರು. ಈ ನಡೆಗಳಿಂದ ನಮ್ಮ ಕಾರ್ಯಕರ್ತರು ಬಹಳಷ್ಟು ನೊಂದಿದ್ದಾರೆ. ಶನಿವಾರ ಪುತ್ತಿಗೆ ಶ್ರೀಗಳ ಕಾರ್ಯಕ್ರಮಕ್ಕೆ ಖಾದರ್ ಬರಬೇಕಿತ್ತು. ಕಾರ್ಯಕರ್ತರು ಕಪ್ಪು ಬಾವುಟ ಪ್ರದರ್ಶನ ಹಾಗೂ ಧಿಕ್ಕಾರಕ್ಕೆ ಸಿದ್ಧರಾಗಿದ್ದರು. ಈ ಕಾರಣದಿಂದಲೇ ಅವರು ಕಾರ್ಯಕ್ರಮಕ್ಕೆ ಬಂದಿಲ್ಲ ಎಂದು ಅವರು ಆರೋಪಿಸಿದರು.



