ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದರ್ಪ, ತನ್ನ ಕೃತ್ಯ ಸಮರ್ಥಿಸಲು ಮುಂದಾದ ಕಡಬ ಪೋಲೀಸರು ಈ ವಿಷ್ಯ ಮರೆತ್ರಾ ?

ಪುತ್ತೂರು,ಎಪ್ರಿಲ್ 22: ಮಾನಸಿಕ ಅಸ್ವಸ್ಥ ವೃದ್ಧನ ಮೇಲೆ ದಕ್ಷಿಣಕನ್ನಡ ಜಿಲ್ಲೆಯ ಕಡಬ ಪೋಲೀಸ್ ಠಾಣೆಯ ಸಿಬ್ಬಂದಿ ನಡೆಸಿದ ಹಲ್ಲೆಗೆ ಇದೀಗ ಭಾರೀ ಆಕ್ರೋಶ  ವ್ಯಕ್ತವಾಗಿದೆ.

ಪೋಲೀಸ್ ಏಟಿನಿಂದ ಗಾಯಗೊಂಡು ಅಂಗಡಿಯೊಂದರ ಮುಂದೆ ಬಿದ್ದುಕೊಂಡಿದ್ದ ವೃದ್ಧನನ್ನು ಸ್ಥಳೀಯರು ಆಸ್ಪತ್ರೆಗೆ ಸೇರಿಸಿ ಆರೈಕೆ ನೀಡಿದ್ದಾರೆ‌.

ಮಾನಸಿಕ ಅಸ್ವಸ್ಥ ವೃದ್ಧನನ್ನು ಕಡಬ ಆಸುಪಾಸಿನ ನಿವಾಸಿ ರಾಮಣ್ಣ ಗೌಡ ಎಂದು ಗುರುತಿಸಲಾಗಿದೆ‌.

ಈ ನಡುವೆ ಹಲ್ಲೆ ನಡೆಸಿದ ಕಡಬ ಪೋಲೀಸ್ ಠಾಣಾ ಸಿಬ್ಬಂದಿ ಕ್ರಮವನ್ನು ಸಮರ್ಥಿಸುವ ರೀತಿಯಲ್ಲಿ ಠಾಣೆಯ ಹಿರಿಯ ಪೋಲೀಸರು ವರ್ತಿಸಲಾರಂಭಿಸಿದ್ದಾರೆ.

ಪೋಲೀಸ್ ಪೇದೆಯ ವಿರುದ್ಧ ಕ್ರಮಕ್ಕೆ ಇಲಾಖೆ ಹಿಂದೇಟು ಹಾಕುತ್ತಿರುವ ಹಿನ್ನಲೆಯಲ್ಲಿ ಕಡಬದ ನೀತಿ ತಂಡ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಲು ತೀರ್ಮಾನಿಸಿದೆ.

ಈ ನಡುವೆ ಹಲ್ಲೆ ನಡೆಸಿದ ಕಡಬ ಪೋಲೀಸ್ ಪಂಪಾಪತಿ ಮಾನಸಿಕ ಅಸ್ವಸ್ಥ ವೃದ್ಧ ದಾರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೋಲೀಸ್ ಹಾಗೂ ಹೋಂಗಾರ್ಡ್ ಗೆ ಕಲ್ಲು ಎಸೆಯಲು ಯತ್ನಿಸಿರುವುದಕ್ಕಾಗಿ ಹಲ್ಲೆ ನಡೆಸಿರುವುದಾಗಿ ಎಂಬ ಸಮರ್ಥನೆಯನ್ನೂ ಕಡಬ ಪೋಲೀಸರು ನೀಡಲಾರಂಭಿಸಿದ್ದಾರೆ.

ಮಾನಸಿಕ ವ್ಯಕ್ತಿಯೆ ಬುದ್ಧಿ ಸ್ಥಿಮಿತದಲ್ಲಿರುವುದಿಲ್ಲ ಎನ್ನುವ ಸಣ್ಣ ವಿಚಾರವನ್ನು ತಿಳಿಯದೆ ಪೋಲೀಸರು ಇದೀಗ ತಮ್ಮ ದರ್ಪವನ್ನು ಸಮರ್ಥಿಸುವ ಹಂತಕ್ಕೆ ತಲುಪಿರುವುದು ವಿಪರ್ಯಾಸವೇ ಆಗಿದೆ.

ಮಾನಸಿಕ ಸ್ಥಿಮಿತ ಕಳೆದುಕೊಂಡ ವ್ಯಕ್ತಿಗೆ ತನ್ನ ಎದುರಿಗಿರುವುದು ದರ್ಪದ ಪೋಲೀಸ್, ಸೌಮ್ಯದ ಮಹಿಳೆ ಎಂದು ತಿಳಿಯುವಷ್ಟು ಬುದ್ಧಿಯಿದ್ದಲ್ಲಿ, ಆತನನ್ನು ಮಾನಸಿಕ ಎಂದು ಕರೆಯುವ ಅಗತ್ಯವೇನಿದೆ.

ಪೇಟೆಯಲ್ಲಿ ಕಲ್ಲು ಹಿಡಿದು ಬೆದರಿಸುವ ಕೆಲಸ ಮಾಡುತ್ತಿದ್ದ ಎನ್ನುವ ಕಾರಣಕ್ಕೆ ಮಾನಸಿಕ ಅಸ್ವಸ್ಥ ವೃದ್ಧನಿಗಾಗಿ ಹೊಡೆಯಲಾಗಿದೆ ಎಂದು ಸಮರ್ಥಿಸಲು ಆರಂಭಿಸಿರುವ ಕಡಬ ಪೋಲೀಸರು ಮಾನಸಿಕ ಅಸ್ವಸ್ಥರಾಗಿರುವ ನೂರಾರು ಮಂದಿ ದಕ್ಷಿಣಕನ್ನಡ ಜಿಲ್ಲೆಯಲ್ಲಿದ್ದು, ಎಲ್ಲರಿಗೂ ಒದ್ದು- ಹೊಡೆದು ಸರಿದಾರಿಗೆ ತರುವ ಪ್ರಯತ್ನವನ್ನು ಮಾಡಬೇಕಿದೆ.

ಇದರಿಂದಾಗಿ ಜಿಲ್ಲೆಯಲ್ಲಿರುವ ನಾಲ್ಕಾರು ಮಾನಸಿಕ ರೋಗಿಗಳಿಗಾಗಿಯೇ ಇರುವ ಆಸ್ಪತ್ರೆಗಳ ಅಗತ್ಯವೂ ಇಲ್ಲದಾಗಿದೆ.

ತನ್ನ ದರ್ಪವನ್ನು ಪ್ರದರ್ಶಿಸಿದ ಬಳಿಕ ಇದೀಗ ಕಡಬ ಪೋಲೀಸರು ಕಡಬ ಪೇಟೆ ತುಂಬಾ ಸಹಿ ಸಂಗ್ರಹ ಅಭಿಯಾನವನ್ನೂ ಕೈಗೊಂಡಿದ್ದು, ಮಾನಸಿಕ ಅಸ್ವಸ್ಥ‌ ವೃದ್ಧ ಕಡಬ ಪೇಟೆ ತುಂಬಾ ಕಲ್ಲೆಸೆದು ಹಾನಿ‌ಮಾಡಿರುವುದಾಗಿ ಸಾಕ್ಷಿ ಸಂಗ್ರಹಿಸುವ ಕಾರ್ಯದಲ್ಲೂ ನಿರತವಾಗಿದೆ ಎನ್ನಲಾಗಿದೆ.

ಇತರರಿಗೆ ತೊಂದರೆ ನೀಡುವ ಇಂಥ ವ್ಯಕ್ತಿಗಳನ್ನು ಯಾವ ರೀತಿಯಲ್ಲಿ ನಿಭಾಯಿಸಬೇಕು ಎನ್ನುವ ಕನಿಷ್ಟ ಜ್ಞಾನವನ್ನೂ ಕಡಬ ಪೋಲೀಸರು ಹೊಂದದಿರುವುದು ಮಾತ್ರ ನಾಚಿಗೇಡಿನ ಸಂಗತಿಯೇ ಆಗಿದೆ.