Connect with us

DAKSHINA KANNADA

ಕಡಬದಲ್ಲಿ ಅರಣ್ಯಾಧಿಕಾರಿಗಳ ವಿರುದ್ಧ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ..ಉಪವಾಸ ನಿರತರ ಮನವಿ ಪುರಸ್ಕರಿಸಲು ಅಧಿಕಾರಿಗಳ ಹಿಂದೇಟು

ಪುತ್ತೂರು ಮಾರ್ಚ್ 18: ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಕಡಬದಲ್ಲಿ ನಡೆಯುತ್ತಿರುವ ಉಪವಾಸ ಸತ್ಯಾಗ್ರಹ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಉಪವಾಸ ನಿರತರ ಮನವಿ ಪುರಸ್ಕರಿಸಲು ಅಧಿಕಾರಿಗಳ ಹಿಂದೇಟು ಹಾಕಿದ್ದು, ಪ್ರತಿಭಟನೆ ಮುಂದುವರೆದಿದೆ.


ಸುಬ್ರಹ್ಮಣ್ಯ ವಲಯದ ಐತ್ತೂರು ರಕ್ಷಿತಾರಣ್ಯದಿಂದ ಬೆಳೆ ಬಾಳುವ ಮರಗಳು ಲೂಟಿಯಾಗುತ್ತಿದೆ ಎಂದು ದೂರು ನೀಡಿದ ಐತ್ತೂರು ಗ್ರಾಮದ ಮೂಜೂರು ನಿವಾಸಿ ಪ್ರಸಾದ್ ಎಂಬವರ ಮನೆಗೆ ಅರಣ್ಯಾಧಿಕಾರಿಗಳು ನಡುರಾತ್ರಿ ದಾಳಿ ನೆಪದಲ್ಲಿ ದಾಂಧಲೆ ನಡೆಸಿ ದ್ವೇಷ ಸಾಧನೆ ಮಾಡಿದ್ದಾರೆ ಎಂದು ಹೇಳಲಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಅರಣ್ಯಾಧಿಕಾರಿಗಳು ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಬೇಕೆಂದು ಅಗ್ರಹಿಸಿ ದೂರುದಾರ ಮನೆಯವರು ಹಾಗೂ ನೀತಿ ತಂಡದವರು ನಡೆಸುತ್ತಿರುವ ಅಮರಣಾಂತ ಉಪವಾಸ ಸತ್ಯಾಗ್ರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ.


ಪುಟ್ಟ ಮಗು,ವೃದ್ಧರೊಂದಿಗೆ ಸಂತ್ರಸ್ಥ ಕುಟುಂಬ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು, ಈಗಾಗಲೇ ಉಪವಾಸ ನಿರತರ ಆರೋಗ್ಯ ಸ್ಥಿತಿಯಲ್ಲಿ ಏರುಪೇರು ಆಗಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೂ ಪೊಲೀಸ್ ಇಲಾಖೆ ಆಗಲಿ ಜಿಲ್ಲಾಡಳಿತವಾಗಲೀ ಪ್ರತಿಭಟನಾ ನಿರತರ ಬೇಡಿಕೆ ಈಡೇರಿಸುವತ್ತ ಮನಸ್ಸು ಮಾಡದೇ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಮಧ್ಯರಾತ್ರಿ ಮನೆಗೆ ನುಗ್ಗಿ ದಾಂಧಲೆ ನಡೆಸಿರುವ ಅರಣ್ಯ ಇಲಾಖೆಯ ಸಿಬ್ಬಂದಿಗಳ ಪರವಾಗಿ ಪೊಲೀಸ್ ಇಲಾಖೆ ಮೃದು ಧೋರಣೆ ಹೊಂದಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಪ್ರತಿಭಟನೆಗೆ ದಲಿತ ಸಂಘಟನೆಗಳು ಬೆಂಬಲ ಸೂಚಿಸಿದ್ದು, ತೀವ್ರ ಹೋರಾಟದ ಎಚ್ಚರಿಕೆ ನೀಡಿವೆ.