ಮಡಿಕೇರಿ, ಮಾರ್ಚ್ 21: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಕುಶಾಲನಗರ ಸಮೀಪದ ನೆಲ್ಲಿ ಹುದಿಕೇರಿ ಗ್ರಾಮದಲ್ಲಿ ಒಂಟಿ ಸಲಗದ ಅಟ್ಟಹಾಸದಿಂದ ಗ್ರಾಮಸ್ಥರು ಭೀತಿಗೀಡಾದ ಘಟನೆ ನಡೆದಿದೆ. ಮನೆ ಬಳಿ ನಿಲ್ಲಿಸಿದ್ದ ಆಟೋ ರಿಕ್ಷಾದ ಮೇಲೆ ದಾಳಿ ನಡೆಸಿದ ಆನೆ, ಅದನ್ನು ಜಖಂಗೊಳಿಸಿ ಬಳಿಕ ಗ್ರಾಮದಲ್ಲಿ ಸಂಚರಿಸಿ ಕಾಫಿ ತೋಟದೊಳಗೂ ದಾಂಧಲೆ ನಡೆಸಿದೆ.

ಬೆಟ್ಟದ ಕಾಡು ನಿವಾಸಿ ಹೆಚ್.ಟಿ. ಸುನಿಲ್ ಅವರಿಗೆ ಸೇರಿದ ಆಟೋ ರಿಕ್ಷಾ ಈ ದಾಳಿಯಿಂದ ಗಂಭೀರವಾಗಿ ಹಾನಿಗೊಳಗಾಗಿದೆ. ಬಳಿಕ ಸಲಗವು ಗ್ರಾಮದ ಶ್ರೀ ಸತ್ಯನಾರಾಯಣ ದೇವಾಲಯದ ಸುತ್ತಮುತ್ತ ಹಾಗೂ ಎಂ.ಜಿ. ಕಾಲೋನಿ ಪ್ರದೇಶಗಳಲ್ಲಿ ಅಲೆದಾಡಿ ಆತಂಕ ಸೃಷ್ಟಿಸಿದೆ. ಆನೆಯನ್ನು ಕಂಡ ಗ್ರಾಮಸ್ಥರು ದಿಕ್ಕುತೋಚದಂತೆ ಓಡಿ ತಮ್ಮ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಗ್ರಾಮದಲ್ಲಿ ಒಂಟಿ ಸಲಗ ಸಂಚರಿಸುತ್ತಿರುವ ಮಾಹಿತಿ ದೊರಕುತ್ತಿದ್ದಂತೆಯೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಅರಣ್ಯ ಸಿಬ್ಬಂದಿ ಡ್ರೋನ್ ಕ್ಯಾಮೆರಾ ಸಹಾಯದಿಂದ ಆನೆಯ ಚಲನವಲನವನ್ನು ಪತ್ತೆಹಚ್ಚಿ, ನಂತರ ಅದನ್ನು ಸುರಕ್ಷಿತವಾಗಿ ಕಾಡಿನತ್ತ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.