LATEST NEWS
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ವಿಧಿವಶ
ಬೆಂಗಳೂರು ಜೂನ್ 10: ಹಿರಿಯ ಸಾಹಿತಿ, ನಾಟಕಕಾರ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಗಿರೀಶ್ ಕಾರ್ನಾಡ್ ಅವರು ಇಂದು ವಿಧಿವಶರಾಗಿದ್ದಾರೆ. ಬೆಂಗಳೂರಿನ ಲ್ಯಾವೆಲ್ಲೆ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಗಿರೀಶ್ ಕಾರ್ನಾಡ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಸೋಮವಾರ ಬೆಳಗ್ಗೆ ನಿಧನರಾಗಿದ್ದಾರೆ.
ಸಿನೆಮಾ ರಂಗದಲ್ಲಿ ಗಂಭೀರ ಪಾತ್ರಗಳ ಮೂಲಕ ಹೆಸರುವಾಸಿಯಾಗಿದ್ದ ಕಾರ್ನಾಡರು, ಹಿಂದಿಯ ಖ್ಯಾತ ನಟ ಸಲ್ಮಾನ್ ಖಾನ್ ಅವರ ಎಕ್ ತಾ ಟೈಗರ್ ಮತ್ತು ಟೈಗರ್ ಜಿಂದಾ ಹೈ ಸಿನೆಮಾಗಳಲ್ಲಿ ನಟಿಸಿದ್ದರು.
ಗಿರೀಶ ಕಾರ್ನಾಡರು 1934 ಮೇ 19ರಂದು ಮಹಾರಾಷ್ಟ್ರದ ಮಾಥೇರದಲ್ಲಿ ಜನಿಸಿದರು. ಇವರ ತಂದೆ ರಘುನಾಥ ಕಾರ್ನಾಡ ಮುಂಬೈಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದರು. ತಾಯಿ ಕೃಷ್ಣಾಬಾಯಿ. ಕಾರ್ನಾಡರ ಪ್ರಾಥಮಿಕ ಶಿಕ್ಷಣ ಉತ್ತರಕನ್ನಡದ ಶಿರಸಿಯಲ್ಲಿ, ಪ್ರೌಢಶಿಕ್ಷಣ ಧಾರವಾಡದ ಬಾಸೆಲ್ ಮಿಷನ್ ಹೈಸ್ಕೂಲಿನಲ್ಲಿ, ಹಾಗೂ ಪದವಿ ಶಿಕ್ಷಣ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಪಡೆದಿದ್ದರು. ಆ ಬಳಿಕ ಪ್ರತಿಷ್ಠಿತ ರೋಡ್ಸ್ ಸ್ಕಾಲರ್ಶಿಪ್ ಪಡೆದುಕೊಂಡು ಆಕ್ಸ್ ಫರ್ಡಿನಲ್ಲಿ ಹೆಚ್ಚಿನ ವ್ಯಾಸಂಗ ಮಾಡಿದರು.
ಆಕ್ಸ್ ಫರ್ಡಿನ ಡಿಬೇಟ್ ಕ್ಲಬ್ಬಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಥಮ ಏಷಿಯನ್ ಇವರು. ಮದ್ರಾಸಿನಲ್ಲಿ ನೌಕರಿಯಲ್ಲಿದ್ದ ಇವರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ಇಂಗ್ಲೆಂಡಿನಲ್ಲಿ ನೆಹರೂ ಸೆಂಟರಿನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ. ಪೂನಾ ಫಿಲ್ಮ್ ಇನ್ಸ್ಟಿಟ್ಯೂಟಿನ ನಿರ್ದೇಶಕರಾಗಿ, ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೂಡಾ ಅವರು ಕಾರ್ಯನಿರ್ವಹಿಸಿದ್ದರು.
ನಾಟಕ ಸಾಹಿತ್ಯ ರಚನೆಗೆ ಜ್ಞಾನಪೀಠ ಪ್ರಶಸ್ತಿ ಪಡೆದ ಕಾರ್ನಾಡರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಗುಬ್ಬಿ ವೀರಣ್ಣ ಪ್ರಶಸ್ತಿ, ಪದ್ಮಶ್ರೀ, ಪದ್ಮಭೂಷಣ, ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, ಹಾಗೂ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿಯನ್ನು ಪಡೆದಿದ್ದಾರೆ.