ಮಂಗಳೂರು ಡಿಸೆಂಬರ್ 18: ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಕೆಳ ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಹಾಗೂ ಒಂದು ವರ್ಷ ಕಾಲ ಜಪ್ಪು ಮಹಾಕಾಳಿಪಡ್ಪು ರೈಲ್ವೇ ಗೆಟ್ ಮುಚ್ಚದಂತೆ ತುಳುನಾಡ ರಕ್ಷಣಾವೇದಿಕೆ ಆಗ್ರಹಿಸಿದೆ.


ಜಪ್ಪು ಮಹಾಕಾಳಿ ಪಡ್ಪು ರೈಲ್ವೆ ಗೇಟ್ ಬಳಿ ನಡೆದ ಹಕ್ಕೊತ್ತಾಯ ಸಭೆಯನ್ನು ಉದ್ದೇಶಿಸಿ ಮಾತನಾಡಿದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಮಹಾಕಾಳಿಪಟ್ಟು ಪ್ರದೇಶವು ಮಂಗಳೂರಿನ ಪ್ರಮುಖ ನಗರ ಪ್ರದೇಶಗಳಲ್ಲೊಂದಾಗಿದ್ದು, ಸಾವಿರಾರು ಜನರು ಇಲ್ಲಿ ವಾಸಿಸುತ್ತಿದ್ದಾರೆ ಎಂದು ಹೇಳಿದರು. ಕೇರಳ, ಮುಡಿಪು, ಕೊಣಾಜೆ ಸೇರಿದಂತೆ ಸುತ್ತಮುತ್ತಲ ಪ್ರದೇಶಗಳಿಂದ ಮಂಗಳೂರು ನಗರಕ್ಕೆ ಆಗಮಿಸುವ ಜನರು ಪಂಪ್ ವೆಲ್ ಮಾರ್ಗದ ಬದಲು ಜಪ್ಪು ಮಹಾಕಾಳಿಪಡ್ಡು ಬೈಪಾಸ್ ರಸ್ತೆಯನ್ನೇ ಹೆಚ್ಚಾಗಿ ಅವಲಂಬಿಸಿದ್ದಾರೆ.


ಈ ಮಾರ್ಗದಲ್ಲಿ ದಿನಕ್ಕೆ 50ಕ್ಕೂ ಹೆಚ್ಚು ರೈಲುಗಳು ಸಂಚರಿಸುತ್ತಿದ್ದು, ಪ್ರತೀ ಬಾರಿ ರೈಲ್ವೆ ಗೇಟ್ ಮುಚ್ಚಿದಾಗ ಸಾರ್ವಜನಿಕರ ಅಮೂಲ್ಯ ಸಮಯ ವ್ಯರ್ಥವಾಗುತ್ತಿದೆ. ಈ ರಸ್ತೆಯನ್ನು ಬಳಸುವ ತುರ್ತು ವಾಹನಗಳಾದ ಅಗ್ನಿಶಾಮಕ ವಾಹನಗಳು, ಆ್ಯಂಬುಲೆನ್ಸ್ ಪೊಲೀಸ್ ವಾಹನಗಳು, ಸಾವಿರಾರು ಪ್ರಯಾಣಿಕರು, ಶಾಲಾ ಮಕ್ಕಳು, ವೃದ್ಧರು ಹಾಗೂ ಹಿರಿಯ ನಾಗರಿಕರು ನಿರಂತರ ತೊಂದರೆಗೆ ಒಳಗಾಗುತ್ತಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.


ನಿರಂತರ ಹೋರಾಟ ನಡೆಸಿದ ಪರಿಣಾಮ, ರೈಲ್ವೇ ಇಲಾಖೆ ಹಾಗೂ ಮಂಗಳೂರು ಮಹಾನಗರ ಪಾಲಿಕೆ ಬಂಟಿಯಾಗಿ ಸುಮಾರು 55 ಕೋಟಿ ರೂ ವೆಚ್ಚದಲ್ಲಿ ರೈಲ್ವೇ ಕೆಳಸೇತುವ ಕಾಮಗಾರಿಯನ್ನು ನಾಲ್ಕು ವರ್ಷಗಳ ಹಿಂದೆ ಕೈಗೆತ್ತಿಕೊಂಡವು. ಆದರೆ, ಒಂದು ವರ್ಷದೊಳಗೆ ಪೂರ್ಣಗೊಳ್ಳಬೇಕಿದ್ದ ಈ ಕಾಮಗಾರಿ, ಸರಕಾರ ನಿಗದಿಪಡಿಸಿದ ಹಲವು ಗಡುವುಗಳ ಬಳಿಕವೂ ಕಳೆದ ಮೂರು ವರ್ಷಗಳಿಂದ ಇನ್ನೂ ಮುಗಿಯದೆ ಇರುವುದು ವಿಷಾದನೀಯವಾಗಿದೆ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಹಾಗೂ ಅವೈಜ್ಞಾನಿಕ ಕಾಮಗಾರಿಯೇ ಈ ವಿಳಂಬಕ್ಕೆ ಪ್ರಮುಖ ಕಾರಣಗಳಾಗಿವೆ ಎಂದು ಅವರು ಆರೋಪಿಸಿದರು.

ಹೀಗಾಗಿ, ಸರಕಾರ ಹಾಗೂ ಸಂಬಂಧಿಸಿದ ಇಲಾಖೆಗಳು ತಕ್ಷಣ ಎಚ್ಚೆತ್ತುಕೊಂಡು ಜಪ್ಪು ಮಹಾಕಾಳಿಪಡ್ಡು ರೈಲ್ವೆ ಕೆಳಸೇತುವೆ ಕಾಮಗಾರಿಯನ್ನು ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕು ಎಂದು ಅವರು ಒತ್ತಾಯಿಸಿದರು. ಜೊತೆಗೆ, ಅವೈಜ್ಞಾನಿಕ ರಸ್ತೆ ನಿರ್ಮಾಣದಿಂದ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಂತು ವಾಹನ ಸವಾರರು ಹಾಗೂ ಸ್ಥಳೀಯರು ಸಂಚರಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗುವ ಸಾಧ್ಯತೆ ಇರುವುದರಿಂದ, ರೈಲ್ವೆ ಕೆಳಸೇತುವೆಯನ್ನು ಕನಿಷ್ಠ ಒಂದು ವರ್ಷಗಳ ಕಾಲ ಪರೀಕ್ಷಾರ್ಥ ಸಂಚಾರಕ್ಕೆ ಒಳಪಡಿಸಿ, ಆ ಅವಧಿಯಲ್ಲಿ ರೈಲ್ವೇ ಗೇಟ್ ಅನ್ನು ಮುಚ್ಚದೆ ಸಾರ್ವಜನಿಕರಿಗೆ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು

Share Information