ಮಂಗಳೂರು, ಏಪ್ರಿಲ್ 02: ಕುವೈತ್ನಲ್ಲಿ ಉದ್ಯೋಗದಲ್ಲಿರುವ ಕರಾವಳಿ ಭಾಗದ ಸಾವಿರಾರು ಅನಿವಾಸಿ ಕನ್ನಡಿಗರ ಬಹುಕಾಲದ ಬೇಡಿಕೆಯೊಂದು ಕೊನೆಗೂ ಈಡೇರಿದ್ದು, ಬರುವ ಏಪ್ರಿಲ್ 8 ರಿಂದ ಕುವೈತ್ ಮತ್ತು ಮಂಗಳೂರು ನಡುವೆ ಅಧಿಕೃತವಾಗಿ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ನೂತನ ಸೇವೆಯು ಸದ್ಯದ ಮಟ್ಟಿಗೆ ಚಾರ್ಟರ್ ವಿಮಾನದ ಮಾದರಿಯಲ್ಲಿ ಕಾರ್ಯಾಚರಿಸಲಿದೆ

ಜಝೀರಾ ಏರ್ವೇಸ್ ಈ ವಿಶೇಷ ವಿಮಾನ ಸೇವೆಯನ್ನು ನಿರ್ವಹಿಸುತ್ತಿದ್ದು, ಕುವೈತ್-ದಮ್ಮಾಮ್-ಮಂಗಳೂರು ಮಾರ್ಗವಾಗಿ ಸಂಚಾರ ನಡೆಸಲಿದೆ. ಈ ವಿಮಾನವು ಪ್ರತಿ ವಾರದಲ್ಲಿ ಎರಡು ದಿನಗಳ ಕಾಲ ಅಂದರೆ ಬುಧವಾರ ಮತ್ತು ಭಾನುವಾರಗಳಂದು ಕಾರ್ಯಾಚರಣೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.
ವೇಳಾಪಟ್ಟಿಯ ವಿವರಗಳ ಪ್ರಕಾರ, ಏಪ್ರಿಲ್ 8 ರ ಬುಧವಾರದಂದು ಬೆಳಿಗ್ಗೆ 8:40ಕ್ಕೆ ಕುವೈತ್ನಿಂದ ಹೊರಡುವ ಜಝೀರಾ ಏರ್ವೇಸ್ನ ಜೆ9-3417 ವಿಮಾನವು ಅಂದು ಸಂಜೆ 4:10ಕ್ಕೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿದೆ. ಅದೇ ದಿನ ಸಂಜೆ 4:55ಕ್ಕೆ ಮಂಗಳೂರಿನಿಂದ ನಿರ್ಗಮಿಸುವ ಜೆ9-3418 ವಿಮಾನವು ರಾತ್ರಿ 7:40ಕ್ಕೆ ಕುವೈತ್ ತಲುಪಲಿದೆ. 
ಕೋವಿಡ್ ಸಮಯದಲ್ಲಿ ಮಂಗಳೂರಿಗೆ ವಿಶೇಷ ವಿಮಾನಗಳ ಸೇವೆ ಒದಗಿಸಿದ್ದ ಜಜೀರಾ ಏರ್ವೇಸ್, ಈಗ ಮಧ್ಯಪ್ರಾಚ್ಯದ ಪ್ರಸ್ತುತ ಉದ್ವಿಗ್ನ ಪರಿಸ್ಥಿತಿಯ ನಡುವೆಯೂ ಸೇವೆ ಪುನರಾರಂಭಿಸಲು ನಿರ್ಧರಿಸಿದೆ. ಈ ಹೊಸ ಮಾರ್ಗಗಳ ಸೇರ್ಪಡೆಯೊಂದಿಗೆ ಭಾರತದಲ್ಲಿ ಜಜೀರಾ ಏರ್ವೇಸ್ನ ಜಾಲವು ಒಟ್ಟು 12 ನಗರಗಳಿಗೆ ವಿಸ್ತರಿಸಿದಂತಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಕೊಚ್ಚಿ, ಮುಂಬೈ ಮತ್ತು ತಿರುವನಂತಪುರಂಗೆ ಈಗಾಗಲೇ ಸಂಸ್ಥೆಯು ವಿಮಾನಯಾನ ಸೇವೆ ಒದಗಿಸುತ್ತಿದೆ.