ಮಂಗಳೂರು, ಮಾರ್ಚ್ 23: ಸರಕಾರಿ ಆರೋಗ್ಯ ವ್ಯವಸ್ಥೆಯ ಸುಧಾರಣೆ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಸರಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ ವಾಮಂಜೂರು’ ಇದರ ನೇತೃತ್ವದಲ್ಲಿ ಸೋಮವಾರ ಬೃಹತ್ ಹಕ್ಕೊತ್ತಾಯ ಪಾದಯಾತ್ರೆ ನಡೆಯಿತು. ನಗರದ ತಾರಿಗುಡ್ಡೆ ಪರಿಸರದಿಂದ ಆರಂಭಗೊಂಡ ಈ ಪಾದಯಾತ್ರೆಯಲ್ಲಿ ನೂರಾರು ಸಾರ್ವಜನಿಕರು ಪಾಲ್ಗೊಂಡು ವಾಮಂಜೂರು ಜಂಕ್ಷನ್ ವರೆಗೆ ಮೆರವಣಿಗೆ ನಡೆಸುವ ಮೂಲಕ ಸರ್ಕಾರದ ಗಮನ ಸೆಳೆದರು.

ವಾಮಂಜೂರು ಜಂಕ್ಷನ್ನಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಮುನೀರ್ ಕಾಟಿಪಳ್ಳ ಅವರು “ಜನರ ಆರೋಗ್ಯವನ್ನು ರಕ್ಷಿಸುವುದು ಸರ್ಕಾರದ ಮೂಲಭೂತ ಕರ್ತವ್ಯವಾಗಿದೆ. ಆರೋಗ್ಯವಂತ ಬದುಕು ಜನರ ಹಕ್ಕಾಗಿದ್ದರೂ, ಇಂದಿನ ಕರ್ನಾಟಕದ ಆರೋಗ್ಯ ಸ್ಥಿತಿ ತೀರಾ ಶೋಚನೀಯವಾಗಿದೆ. ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಎಟಕದಷ್ಟು ಆರೋಗ್ಯ ವ್ಯವಸ್ಥೆ ದುಬಾರಿಯಾಗಿರುವುದು ಇಂದಿನ ಪ್ರಮುಖ ಸಮಸ್ಯೆಯಾಗಿದೆ,” ಎಂದು ಆತಂಕ ವ್ಯಕ್ತಪಡಿಸಿದರು.
ಮುಂದುವರಿದು ಮಾತನಾಡಿದ ಅವರು, “ಗೌರವಯುತ ಬದುಕು ಇಂದಿನ ಸಮಾಜದಲ್ಲಿ ದುಸ್ತರ ಎಂದಾದರೆ, ಗೌರವಯುತವಾದ ಸಾವನ್ನು ಕಾಣುವುದು ಕೂಡ ಇಂದಿನ ಕಾಲದಲ್ಲಿ ಕಷ್ಟದ ಕೆಲಸವಾಗಿದೆ. ಗ್ರಾಮೀಣ ಭಾಗದಲ್ಲಿ ಜನತೆಗೆ ಸಹಕಾರಿಯಾಗಬೇಕಿದ್ದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮೂಲಭೂತ ಸೌಕರ್ಯಗಳ ಕೊರತೆಯಿಂದ ಸೊರಗಿ ಹೋಗಿವೆ. ಜಿಲ್ಲೆಯ ಕಂಬಳ, ಬಂಗಾರದ ಅಂಗಡಿಗಳ ಉದ್ಘಾಟನೆಯಲ್ಲಿ ಇರುವಂತಹ ಕನಿಷ್ಠ ಆಸಕ್ತಿಯು ಜನಪ್ರತಿನಿಧಿಗಳಿಗೆ ಜನರ ಆರೋಗ್ಯದ ಕುರಿತಾಗಿ ಇಲ್ಲ,” ಎಂದು ಟೀಕಿಸಿದರು.
ಕಾರ್ಮಿಕ ಮುಖಂಡ ಸದಾಶಿವ ದಾಸ್ ಮಾತನಾಡಿ, “ಕೇರಳದ ಚುನಾವಣಾ ಪ್ರಚಾರದ ವೇಳೆ ಕಾಸರಗೋಡಿನಲ್ಲಿ ಸರ್ಕಾರಿ ಆಸ್ಪತ್ರೆಗಳನ್ನು ಹುಡುಕಾಡುವ ಮಂಗಳೂರಿನ ಜನಪ್ರತಿನಿಧಿಗಳು, ಮಂಗಳೂರಿನಲ್ಲಿ ಎಷ್ಟು ಸರ್ಕಾರಿ ಆಸ್ಪತ್ರೆಗಳನ್ನು ಸ್ಥಾಪಿಸಿದ್ದಾರೆ ಎಂಬ ಪ್ರಶ್ನೆಗೆ ಮೊದಲು ಉತ್ತರಿಸಬೇಕು. ಜಿಲ್ಲೆಯ ಹೋಬಳಿಗಳಲ್ಲಿ ಸಮುದಾಯ ಆರೋಗ್ಯ ಕೇಂದ್ರಗಳಿಲ್ಲ, ಇರುವ ಪ್ರಾಥಮಿಕ ಕೇಂದ್ರಗಳಲ್ಲಿ ವೈದ್ಯರಿಲ್ಲದೆ ಜನರು ಪರದಾಡುವಂತಾಗಿದೆ,” ಎಂದರು.
ಹೋರಾಟ ಸಮಿತಿಯ ಮುಖಂಡ ಮನೋಜ್ ವಾಮಂಜೂರು ಅವರು ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ಎಂಟು ಹುದ್ದೆಗಳನ್ನು ತಕ್ಷಣ ಭರ್ತಿ ಮಾಡಬೇಕು ಹಾಗೂ ಔಷಧಗಳ ಕೊರತೆಯನ್ನು ನೀಗಿಸಬೇಕು. ಮಂಗಳೂರಿನಲ್ಲಿ ಪ್ರಸ್ತಾಪಿತ ಜಯದೇವ ಆಸ್ಪತ್ರೆಯ ಘಟಕದ ಸ್ಥಾಪನೆಗೆ ಕೂಡಲೇ ಗಮನಹರಿಸಬೇಕು.ಗುರುಪುರ ಹೋಬಳಿಗೆ ಪ್ರತ್ಯೇಕ ಸಮುದಾಯ ಆಸ್ಪತ್ರೆಯನ್ನು ನಿರ್ಮಿಸಬೇಕು ಎಂಬ ಬೇಡಿಕೆಗಳನ್ನು ಸರಕಾರ ಮುಂದಿಟ್ಟರು
ಪಾದಯಾತ್ರೆಯ ಅಂತ್ಯದಲ್ಲಿ ಕುಡುಪು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಚಿರಾಗ್ ಅವರು ಸ್ಥಳಕ್ಕೆ ಆಗಮಿಸಿ ಪ್ರತಿಭಟನಾಕಾರರಿಂದ ಅಧಿಕೃತ ಮನವಿಯನ್ನು ಸ್ವೀಕರಿಸಿದರು. ಈ ಬೇಡಿಕೆಗಳ ಈಡೇರಿಕೆಗೆ ನಿರಂತರ ಹೋರಾಟ ನಡೆಸಲಾಗುವುದು ಎಂದು ಸಮಿತಿ ಎಚ್ಚರಿಸಿದೆ.