ಪುತ್ತೂರು ಎಪ್ರಿಲ್ 22: ಮಾಜಿ ಸಚಿವ ಹಾಗೂ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಪುತ್ತೂರು ತಾಲೂಕಿನ ಸವಣೂರಿನ ಅರೆಲ್ತಡಿ ದೈವಸ್ಥಾನಕ್ಕೆ ಇಂದು ಭೇಟಿ ನೀಡಿದ್ದಾರೆ. ಈ ಹಿಂದೆ ತಾವು ಜೈಲಿನಲ್ಲಿದ್ದ ಸಂದರ್ಭದಲ್ಲಿ ಬಿಡುಗಡೆಯಾಗುವಂತೆ ಹೊತ್ತಿದ್ದ ಹರಕೆಯನ್ನು ತೀರಿಸಲು ಅವರು ಇಲ್ಲಿನ ಗ್ರಾಮ ದೈವ ‘ಕೆಡೆಂಜೋಡಿತ್ತಾಯಿ’ಗೆ ಹರಕೆ ನೇಮ ನೀಡಲಿದ್ದಾರೆ.

ಕಳೆದ ವರ್ಷ ಪ್ರಕರಣವೊಂದರಲ್ಲಿ ಜನಾರ್ದನ ರೆಡ್ಡಿ ಅವರು ಜೈಲು ಪಾಲಾಗಿದ್ದಾಗ, ಅವರ ಬಿಡುಗಡೆಗಾಗಿ ಸವಣೂರಿನ ಅರೆಲ್ತಡಿಯಲ್ಲಿ ಜನಾರ್ಧನ ರೆಡ್ಡಿ ಅವರ ಅಭಿಮಾನಿಗಳು ದೈವದ ಮೊರೆ ಹೋಗಿದ್ದರು. ಅಂದು ದೈವದ ನೇಮದ ಸಂದರ್ಭದಲ್ಲಿ, “ಒಂದು ತಿಂಗಳ ಒಳಗಾಗಿ ರೆಡ್ಡಿ ಬಿಡುಗಡೆಯಾಗಲಿದ್ದಾರೆ” ಎಂದು ದೈವ ಅಭಯ ನುಡಿದಿತ್ತು ಎನ್ನಲಾಗಿದೆ. ದೈವದ ನುಡಿಯಂತೆಯೇ ರೆಡ್ಡಿ ಅವರು ಜೈಲಿನಿಂದ ಬಿಡುಗಡೆಯಾದ ಹಿನ್ನೆಲೆಯಲ್ಲಿ, ಇಂದು ರಾತ್ರಿ ನಡೆಯಲಿರುವ ಹರಕೆ ಕೋಲದಲ್ಲಿ ರೆಡ್ಡಿ ಕುಟುಂಬಸ್ಥರು ಭಾಗವಹಿಸಲಿದ್ದಾರೆ.
ಜನಾರ್ದನ ರೆಡ್ಡಿ ಅವರ ಪತ್ನಿ ಅರುಣಾ ಲಕ್ಷ್ಮಿ ಹಾಗೂ ಕುಟುಂಬದ ಇತರ ಸದಸ್ಯರು ಸವಣೂರಿಗೆ ಆಗಮಿಸಿದ್ದು, ಗ್ರಾಮ ದೈವಕ್ಕೆ ವಿಶೇಷ ಪೂಜೆ ಸಲ್ಲಿಸಿ ಹರಕೆ ನೇಮವನ್ನು ನೆರವೇರಿಸಲಿದ್ದಾರೆ.