ಇಸ್ಲಾಮಾಬಾದ್,ಮಾರ್ಚ್ 31 : ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ನ ಕಿರಿಯ ಸಹೋದರ ತಾಹಿರ್ ಅನ್ವರ್ ಪಾಕಿಸ್ತಾನದ ಬಹವಾಲ್ಪುರದಲ್ಲಿ ಸಂಶಯಾಸ್ಪದವಾಗಿ ಮೃತಪಟ್ಟಿದ್ದಾನೆ. ಸೋಮವಾರ ತಡರಾತ್ರಿ ಈತನ ಅಂತ್ಯಕ್ರಿಯೆ ನಡೆದಿದ್ದು, ಸಾವಿನ ಸುತ್ತ ಹಲವು ಅನುಮಾನಗಳು ಎದ್ದಿವೆ.

ವಿವಿಧ ಮಾಧ್ಯಮಗಳ ವರದಿಗಳ ಪ್ರಕಾರ, ತಾಹಿರ್ ಅನ್ವರ್ ಸಾವಿನ ಸುದ್ದಿ ಮೊದಲು ಜೈಶ್ ಸಂಘಟನೆಯ ಆಂತರಿಕ ಟೆಲಿಗ್ರಾಮ್ ಚಾನಲ್ಗಳ ಮೂಲಕ ಹೊರಬಿದ್ದಿದೆ. ಆತ ಸಂಘಟನೆಯ ಮಹಿಳಾ ವಿಭಾಗವಾದ ‘ಜಮಾತ್-ಉನ್-ಮೊಮಿನಾತ್’ ಕೇಂದ್ರದಲ್ಲಿ ಕೊನೆಯುಸಿರೆಳೆದಿದ್ದಾನೆ ಎಂದು ಹೇಳಲಾಗುತ್ತಿದೆ. ಆರಂಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ ಎಂಬ ಮಾಹಿತಿ ಲಭ್ಯವಾಗಿತ್ತಾದರೂ, ಸಂಘಟನೆಯ ಪ್ರಭಾವಿ ನಾಯಕನೊಬ್ಬ ಅಸಹಜ ಸ್ಥಳದಲ್ಲಿ ಸಾವನ್ನಪ್ಪಿರುವುದು ಜಾಗತಿಕ ಗುಪ್ತಚರ ಸಂಸ್ಥೆಗಳ ಗಮನ ಸೆಳೆದಿದೆ.
ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ನೆಲದಲ್ಲಿ ಆಶ್ರಯ ಪಡೆದಿರುವ ಭಾರತ ವಿರೋಧಿ ಭಯೋತ್ಪಾದಕರು ಸರಣಿ ಹತ್ಯೆಗೀಡಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ತಾಹಿರ್ ಅನ್ವರ್ ಸಾವು ಕೂಡ ‘ಅಪರಿಚಿತ ಬಂದೂಕುಧಾರಿಗಳ’ ಕೃತ್ಯವಿರಬಹುದೇ ಎಂಬ ಪ್ರಶ್ನೆ ಮೂಡಿದೆ. ಅದರಲ್ಲೂ ಇತ್ತೀಚೆಗೆ ನಡೆದ ‘ಆಪರೇಷನ್ ಸಿಂದೂರ್’ ದಾಳಿಯ ಬಳಿಕ ಜೈಶ್ ಸಂಘಟನೆಯು ಕಂಗೆಟ್ಟಿದ್ದು, ಈ ಸಾವು ಸಂಘಟನೆಗೆ ದೊಡ್ಡ ಆಘಾತ ನೀಡಿದೆ. ಮಸೂದ್ ಅಜರ್ನ ಐವರು ಸಹೋದರರಲ್ಲಿ ಒಬ್ಬನಾದ ಈತ, ಜೈಶ್ ಸಂಘಟನೆಯ ಸಶಸ್ತ್ರ ಕೆಡರ್ಗಳ ತರಬೇತಿ ಮತ್ತು ಆಂತರಿಕ ವ್ಯವಹಾರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ. ಭಾರತದ ಮೇಲೆ ನಡೆದ ಹಲವು ಗಡಿಯಾಚೆಗಿನ ದಾಳಿಗಳ ಸಂಚಿನ ಹಿಂದೆ ಈತನ ಪಾತ್ರವಿತ್ತು ಎಂದು ಗುಪ್ತಚರ ಮೂಲಗಳು ತಿಳಿಸಿವೆ. ಬಹವಾಲ್ಪುರದ ಜಾಮಿಯಾ ಮಸೀದಿ ಉಸ್ಮಾನ್ ಅಲಿಯಲ್ಲಿ ತಡರಾತ್ರಿ ನಡೆದ ಅಂತ್ಯಕ್ರಿಯೆಯಲ್ಲಿ ಸಂಘಟನೆಯ ಪ್ರಮುಖರು ಭಾಗವಹಿಸಿದ್ದರು ಎನ್ನಲಾಗಿದೆ.
ಪಾಕಿಸ್ತಾನ ಸರ್ಕಾರವಾಗಲಿ ಅಥವಾ ಅಲ್ಲಿನ ಸೇನೆಯಾಗಲಿ ಈ ಸಾವಿನ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಇದು ಪಾಕಿಸ್ತಾನದಲ್ಲಿ ಅಡಗಿ ಕುಳಿತಿರುವ ಉಗ್ರರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿರುವುದನ್ನು ಎತ್ತಿ ತೋರಿಸುತ್ತಿದೆ.