ಜೈಪುರ,ಏಪ್ರಿಲ್ 04: ರಾಜಸ್ಥಾನದ ಪ್ರಸಿದ್ಧ ‘ಪಿಂಕ್ ಸಿಟಿ’ಯಲ್ಲಿ ಪ್ರವಾಸಿಗರ ಆಕರ್ಷಣೆಯಾಗಿದ್ದ, ‘ಪಿಂಕ್ ಎಲಿಫೆಂಟ್’ ಎಂದೇ ಗುರುತಿಸಿಕೊಂಡಿದ್ದ ‘ಚಂಚಲ್’ ಎಂಬ ಹೆಸರಿನ 67 ವರ್ಷದ ಹೆಣ್ಣು ಆನೆ ಹೃದಯಾಘಾತದಿಂದ ಸಾವನ್ನಪ್ಪಿದೆ. ಕಳೆದ ಫೆಬ್ರವರಿ 4 ರಂದು ಮಧ್ಯಾಹ್ನ 3:30 ರ ಸುಮಾರಿಗೆ ಈ ಸಾವು ಸಂಭವಿಸಿದ್ದು, ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ವೃದ್ಧಾಪ್ಯ ಸಹಜ ಹೃದಯ ಸ್ತಂಭನ ಮತ್ತು ಉಸಿರಾಟದ ವೈಫಲ್ಯದಿಂದ ಸಾವು ಸಂಭವಿಸಿರುವುದು ದೃಢಪಟ್ಟಿದೆ ಎಂದು ವೈದ್ಯಕೀಯ ತಂಡದ ಮುಖ್ಯಸ್ಥ ಡಾ. ಅರವಿಂದ್ ಮಾಥುರ್ ತಿಳಿಸಿದ್ದಾರೆ.

ಸುಮಾರು ಒಂದು ವರ್ಷದ ಹಿಂದೆ ರಷ್ಯಾದ ಛಾಯಾಗ್ರಾಹಕಿ ಜೂಲಿಯಾ ಬುರುಲೆವಾ ಅವರು ನಡೆಸಿದ್ದ ಫೋಟೋಶೂಟ್ಗಾಗಿ ಈ ಆನೆಗೆ ಸಂಪೂರ್ಣವಾಗಿ ಗುಲಾಬಿ ಬಣ್ಣ ಬಳಿಯಲಾಗಿತ್ತು. ಇತ್ತೀಚೆಗೆ ಅದರ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೆ ಪ್ರಾಣಿಪ್ರಿಯರಿಂದ ಭಾರೀ ಆಕ್ರೋಶಕ್ಕೆ ಕಾರಣವಾಗಿತ್ತು. ಈ ನಡುವೆ ಆನೆ ಸಾವನಪ್ಪಿದ್ದು, ಆನೆಯ ಸಾವಿಗೆ ಅತಿಯಾದ ರಾಸಾಯನಿಕ ಬಣ್ಣ ಬಳಕೆಯೇ ಕಾರಣ ಎಂದು ಆರೋಪಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆನೆಯ ಮಾಲೀಕರು, ಛಾಯಾಗ್ರಾಹಕಿ ಹಾಗೂ ಅರಣ್ಯ ಇಲಾಖೆಯನ್ನು ಹೊಣೆಗಾರರನ್ನಾಗಿ ಮಾಡಬೇಕೆಂಬ ಮಾತು ಕೇಳಿ ಬಂದಿತ್ತು. ಆದರೆ ಇದೀಗ ಆನೆಯ ಸಾವಿಗೆ ಕಾರಣ ತಿಳಿದು ಬಂದಿದೆ. ಆನೆಯನ್ನು ನೋಡಿಕೊಳ್ಳುತ್ತಿದ್ದ ಬಲ್ಲು ಖಾನ್ ಈ ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಆನೆಗೆ ಸುಮಾರು 70 ವರ್ಷ ವಯಸ್ಸಾಗಿತ್ತು, ಸಾವು ಸಂಪೂರ್ಣ ನೈಸರ್ಗಿಕವಾಗಿದೆ. ಫೋಟೋಶೂಟ್ ನಡೆದದ್ದು ಒಂದು ವರ್ಷದ ಹಿಂದೆ ಮತ್ತು ಆಗ ಕೇವಲ ಹೋಳಿ ಆಚರಣೆಯ ಗುಲಾಲ್ ಪುಡಿಯನ್ನು ಬಳಸಲಾಗಿತ್ತು. ಬಣ್ಣ ಹಚ್ಚಿದ ಅರ್ಧ ಗಂಟೆಯಲ್ಲೇ ಅದನ್ನು ತೊಳೆದು ಸ್ವಚ್ಛಗೊಳಿಸಲಾಗಿತ್ತು,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ನಡುವೆ, ಸಾರ್ವಜನಿಕ ಒತ್ತಡಕ್ಕೆ ಮಣಿದಿರುವ ರಾಜಸ್ಥಾನ ಅರಣ್ಯ ಇಲಾಖೆಯು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ. ವೃದ್ಧ ಆನೆಯನ್ನು ಅಂತಹ ಫೋಟೋಶೂಟ್ಗೆ ಬಳಸಲು ಅನುಮತಿ ನೀಡಿದ್ದು ಯಾರು ಮತ್ತು ವಾಣಿಜ್ಯ ಉದ್ದೇಶಕ್ಕಾಗಿ ಪ್ರಾಣಿ ಸಂರಕ್ಷಣಾ ನಿಯಮಗಳನ್ನು ಉಲ್ಲಂಘಿಸಲಾಗಿದೆಯೇ ಎಂಬ ಬಗ್ಗೆ ತನಿಖೆ ನಡೆಯಲಿದೆ.