ಇಸ್ರೇಲ್, ಏಪ್ರಿಲ್ 25: ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರು ತಮಗಿದ್ದ ಪ್ರಾಸ್ಟೇಟ್ ಕ್ಯಾನ್ಸರ್ ಕಾಯಿಲೆಗೆ ಇತ್ತೀಚೆಗೆ ಚಿಕಿತ್ಸೆ ಪಡೆದಿದ್ದೆನೆ ಎಂದು ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಈ ವಿಷಯವನ್ನು ಅತ್ಯಂತ ಗೌಪ್ಯವಾಗಿಟ್ಟಿದ್ದ ಅವರು, ಈಗ ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾದ ಬಳಿಕ ತಮಗಿದ್ದ ಆರೋಗ್ಯ ಸಮಸ್ಯೆಯ ಕುರಿತು ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.

ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ತೀವ್ರ ಸಂಘರ್ಷ ನಡೆಯುತ್ತಿರುವ ಹಿನ್ನೆಲೆಯಲ್ಲಿ, ರಾಷ್ಟ್ರದ ಸುರಕ್ಷತೆ ಮತ್ತು ರಾಜಕೀಯ ಸ್ಥಿರತೆಯ ದೃಷ್ಟಿಯಿಂದ ನೆತನ್ಯಾಹು ತಮ್ಮ ಅನಾರೋಗ್ಯದ ಸುದ್ದಿಯನ್ನು ಹೊರಹಾಕಿರಲಿಲ್ಲ. “ಯುದ್ಧದ ಸಂದರ್ಭದಲ್ಲಿ ಶತ್ರು ರಾಷ್ಟ್ರಗಳು ನನ್ನ ಆರೋಗ್ಯದ ಸ್ಥಿತಿಯನ್ನು ಅಪಪ್ರಚಾರಕ್ಕೆ ಬಳಸಿಕೊಳ್ಳಬಾರದು ಎಂಬ ಕಾರಣಕ್ಕೆ ಅಪ್ಡೇಟ್ ನೀಡಲು ವಿಳಂಬ ಮಾಡಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ ಮತ್ತು ಅತ್ಯುತ್ತಮ ದೈಹಿಕ ಸ್ಥಿತಿಯಲ್ಲಿದ್ದೇನೆ,” ಎಂದು ನೆತನ್ಯಾಹು ‘ಎಕ್ಸ್’ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಕಾರ್ಯಾಲಯ ಬಿಡುಗಡೆ ಮಾಡಿದ ಮತ್ತು ‘ದಿ ಜೆರುಸಲೆಮ್ ಪೋಸ್ಟ್’ ಉಲ್ಲೇಖಿಸಿರುವ ಅಧಿಕೃತ ವೈದ್ಯಕೀಯ ವರದಿಯ ಪ್ರಕಾರ, ನೆತನ್ಯಾಹು ಅವರ ಪ್ರಾಸ್ಟೇಟ್ನಲ್ಲಿ 0.9 ಸೆಂಟಿಮೀಟರ್ಗಿಂತಲೂ ಕಡಿಮೆ ಗಾತ್ರದ ಸಣ್ಣ ಗೆಡ್ಡೆ ಪತ್ತೆಯಾಗಿತ್ತು. ಇದನ್ನು ಆರಂಭಿಕ ಹಂತದ ‘ಅಡೆನೊಕಾರ್ಸಿನೋಮ’ ಎಂದು ಗುರುತಿಸಲಾಗಿತ್ತು. ಜೆರುಸಲೆಮ್ನ ಹಡಸ್ಸಾ ಆಸ್ಪತ್ರೆಯಲ್ಲಿ ಅವರು ಅತ್ಯಾಧುನಿಕ ‘ಟಾರ್ಗೆಟೆಡ್ ರೇಡಿಯೇಶನ್ ಥೆರಪಿ’ಗೆ ಒಳಗಾಗಿದ್ದರು.
ನೆತನ್ಯಾಹು ಅವರು ಡಿಸೆಂಬರ್ 29, 2024ರಂದು ಪ್ರಾಸ್ಟೇಟ್ ಹೈಪರ್ಪ್ಲಾಸಿಯಾ ಸಮಸ್ಯೆಗೆ ಶಸ್ತ್ರಚಿಕಿತ್ಸೆಗೊಳಗಾಗಿದ್ದರು. ಅಂದಿನಿಂದ ಅವರು ನಿಯಮಿತವಾಗಿ ವೈದ್ಯಕೀಯ ತಪಾಸಣೆಯಲ್ಲಿದ್ದ ಕಾರಣ, ಈಗಿನ ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಿ ಗುಣಪಡಿಸಲು ಸಾಧ್ಯವಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
“ದೇವರಿಗೆ ಧನ್ಯವಾದಗಳು, ನಾನು ಈ ಸವಾಲನ್ನೂ ಜಯಿಸಿದ್ದೇನೆ” ಎಂದು ಹರ್ಷ ವ್ಯಕ್ತಪಡಿಸಿರುವ ಅವರು, ನಾಗರಿಕರು ತಮ್ಮ ಆರೋಗ್ಯದ ಬಗ್ಗೆ ಜಾಗೃತರಾಗಿರಬೇಕು ಮತ್ತು ನಿಯಮಿತವಾಗಿ ವೈದ್ಯಕೀಯ ತಪಾಸಣೆಗೆ ಒಳಗಾಗಬೇಕು ಎಂದು ಮನವಿ ಮಾಡಿದ್ದಾರೆ.25