ದುಬೈ ಫೆಬ್ರವರಿ 28: ಇಸ್ರೇಲ್ ಮತ್ತು ಅಮೆರಿಕ (US) ಜಂಟಿಯಾಗಿ ನಡೆಸಿದ ದಾಳಿಯ ನಂತರ, ಇರಾನ್ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮೇಲೆ ಕ್ಷಿಪಣಿಗಳ ದಾಳಿ ನಡೆಸಿದೆ. ಇದೀಗ ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ವರದಿಯಾಗಿದೆ.

ಇರಾನ್ ಮೇಲೆ ಇಸ್ರೇಲ್ ಮತ್ತು ಅಮೆರಿಕಾ ದಾಳಿ ನಡೆಸಿದ ಬಳಿಕ ಇರಾನ್ ಗಲ್ಪ್ ರಾಷ್ಟ್ರಗಳ ಮೇಲೆ ತನ್ನ ಸೇಡನ್ನು ತೀರಿಸಿಕೊಳ್ಳುತ್ತಿದೆ. ಇದೀಗ ಮಿಲಿಟರಿ ನೆಲೆ ಬಿಟ್ಟು, ಜನ ನಿಬಿಡ ಪ್ರದೇಶಗಳ ಮೇಲೆ ಡ್ರೋನ್ ದಾಳಿ ಪ್ರಾರಂಭಿಸಿದೆ. ಈ ನಡುವೆ ದುಬೈ ಇಂಟರ್ನ್ಯಾಷನಲ್ (DXB) ಮತ್ತು ದುಬೈ ವರ್ಲ್ಡ್ ಸೆಂಟ್ರಲ್ – ಅಲ್ ಮಕ್ತೌಮ್ ಇಂಟರ್ನ್ಯಾಷನಲ್ (DWC) ನಲ್ಲಿನ ಎಲ್ಲಾ ವಿಮಾನ ಕಾರ್ಯಾಚರಣೆಗಳನ್ನು ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ದುಬೈ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯಾಣಿಕರು ಈ ಸಮಯದಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸದಂತೆ ಮತ್ತು ಅವರ ವಿಮಾನಗಳ ಕುರಿತು ಇತ್ತೀಚಿನ ಮಾಹಿತಿಗಳಿಗಾಗಿ ನೇರವಾಗಿ ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ, ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಿದ ನಂತರ ಹೆಚ್ಚಿನ ನವೀಕರಣಗಳನ್ನು ಒದಗಿಸುವುದಾಗಿ ಹೇಳಿದರು. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ವಿಶ್ವದ ಅತ್ಯಂತ ಜನನಿಬಿಡ ವಿಮಾನ ನಿಲ್ದಾಣವೆಂದು ಪರಿಗಣಿಸಲಾಗಿದೆ.

ದುಬೈನಲ್ಲಿ ಪರಿಸ್ಥಿತಿ ಇನ್ನೂ ಭೀಕರವಾಗಿದ್ದು, ಜನರು ಒಳಗೆ ಇರುವಂತೆ ಮತ್ತು ಜಾಗರೂಕರಾಗಿರಲು ಸರ್ಕಾರ ಕೇಳಿಕೊಂಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಐಕಾನಿಕ್ ಬುರ್ಜ್ ಖಲೀಫಾದಲ್ಲಿನ ಜನರನ್ನು ಖಾಲಿ ಮಾಡಲು ಸೂಚಿಸಿದ್ದಾರೆ ಎಂದು ವರದಿಯಾಗಿದೆ. ನೆರೆಯ ಅಬುಧಾಬಿಯಲ್ಲಿ, ಇರಾನಿನ ದಾಳಿಯಿಂದಾಗಿ ಕನಿಷ್ಠ ಒಬ್ಬ ವ್ಯಕ್ತಿ ಸಾವನಪ್ಪಿದ್ದಾನೆ. ಇನ್ನೊಂದೆಡೆ ಗಲ್ಫ್ ರಾಷ್ಟ್ರವು ಇರಾನ್ಗೆ ಎಚ್ಚರಿಕೆ ನೀಡಿದ್ದು, ತನ್ನ ಭದ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಹೇಳಿದೆ.