ಟೆಹ್ರಾನ್ ಜುಲೈ 08: ಇರಾನ್ ಮತ್ತು ಅಮೇರಿಕಾದ ನಡುವಿನ ಶಾಂತಿ ಮಾತುಕತೆ ನಿಯಂತ್ರಣ ತಪ್ಪಿ ಮತ್ತೆ ಯುದ್ದಕ್ಕೆ ಕಾರಣವಾಗುತ್ತಿದೆ. ಹಾರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಮೇಲಿನ ದಾಳಿಗೆ ಪ್ರತಿಯಾಗಿ ಬುಧವಾರ ಮುಂಜಾನೆ ಅಮೆರಿಕ ನಡೆಸಿದ ವೈಮಾನಿಕ ದಾಳಿಗೆ ಇರಾನ್ ಅತ್ಯಂತ ಭೀಕರವಾಗಿ ಪ್ರತ್ಯುತ್ತರ ನೀಡಿದೆ. ಅಮೆರಿಕದ ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಇರಾನ್ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಬಹರೇನ್ ಮತ್ತು ಕುವೈತ್ ರಾಷ್ಟ್ರಗಳಲ್ಲಿರುವ ಅಮೆರಿಕದ ಬರೋಬ್ಬರಿ 85 ಪ್ರಮುಖ ಮಿಲಿಟರಿ ನೆಲೆಗಳ ಮೇಲೆ ಏಕಕಾಲದಲ್ಲಿ ಭೀಕರ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿರುವುದಾಗಿ ಬುಧವಾರ ಪ್ರಕಟಿಸಿದೆ. ಈ ಗಂಭೀರ ಬೆಳವಣಿಗೆಯಿಂದಾಗಿ ಉಭಯ ದೇಶಗಳ ನಡುವಿನ ಮಧ್ಯಂತರ ಕದನ ವಿರಾಮ ಒಪ್ಪಂದವು ಸಂಪೂರ್ಣವಾಗಿ ಮುರಿದುಬಿದ್ದಿದೆ.

ಇರಾನ್ನ ಸರ್ಕಾರಿ ಪ್ರಸಾರ ಸಂಸ್ಥೆ ಐಆರ್ಐಬಿ (IRIB) ಬಿಡುಗಡೆ ಮಾಡಿರುವ ಪ್ರಕಟಣೆಯ ಪ್ರಕಾರ, “ಅಮೆರಿಕದ ವಾಯುದಾಳಿಗೆ ಆರಂಭಿಕ ಪ್ರತಿಕ್ರಿಯೆಯಾಗಿ ಐಆರ್ಜಿಸಿ ನೌಕಾಪಡೆ ಹಾಗೂ ವೈಮಾನಿಕ ಪಡೆ ಜಂಟಿಯಾಗಿ ಈ ಬೃಹತ್ ಕಾರ್ಯಾಚರಣೆ ನಡೆಸಿವೆ.” ಬಹರೇನ್ ಹಾಗೂ ಕುವೈತ್ನಲ್ಲಿರುವ ಅಮೆರಿಕದ ಆಯಕಟ್ಟಿನ ಸೇನಾ ನೆಲೆಗಳನ್ನೇ ಗುರಿಯಾಗಿಸಿ ನೂರಾರು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ಇದೇ ಕಾರ್ಯಾಚರಣೆಯಲ್ಲಿ ಅಮೆರಿಕದ ಅತ್ಯಂತ ಸುಧಾರಿತ ಹಾಗೂ ಕೋಟ್ಯಂತರ ರೂಪಾಯಿ ಮೌಲ್ಯದ ‘MQ-9 Reaper’ ಮಾನವರಹಿತ ಕಣ್ಗಾವಲು ಯುದ್ಧ ಡ್ರೋನ್ ಅನ್ನು ಹೊಡೆದುರುಳಿಸಿರುವುದಾಗಿ ಇರಾನ್ ಮಿಲಿಟರಿ ಪಡೆಗಳು ಪ್ರತಿಪಾದಿಸಿವೆ.
ಬಹರೇನ್ ದೇಶವು ಅಮೆರಿಕದ ನೌಕಾಪಡೆಯ ಅತ್ಯಂತ ಶಕ್ತಿಶಾಲಿ ‘ಐದನೇ ನೌಕಾಪಡೆ’ಯ (US Fifth Fleet) ಮುಖ್ಯ ಕೇಂದ್ರ ಕಚೇರಿಯನ್ನು ಹೊಂದಿದ್ದು, ಇಡೀ ಮಧ್ಯಪ್ರಾಚ್ಯದ ಜಲಮಾರ್ಗವನ್ನು ನಿಯಂತ್ರಿಸುವ ಶಕ್ತಿಯಾಗಿದೆ. ಇತ್ತ ಕುವೈತ್ ದೇಶದಲ್ಲಿ ಅಮೆರಿಕದ ಭೂಸೇನೆಯ ಪ್ರಮುಖ ನೆಲೆಗಳಿವೆ. ಅಮೆರಿಕ ಇರಾನ್ನ ಸೇನಾ ನೆಲೆಗಳು, ವಾಯು ರಕ್ಷಣಾ ವ್ಯವಸ್ಥೆಗಳು ಮತ್ತು ರೆವಲ್ಯೂಷನರಿ ಗಾರ್ಡ್ಗೆ ಸೇರಿದ ಮೂಲಸೌಕರ್ಯಗಳ ಮೇಲೆ ವಾಯುದಾಳಿ ನಡೆಸಿದ ಕೆಲವೇ ಗಂಟೆಗಳ ಬಳಿಕ ಇರಾನ್ ಈ ದುಸ್ಸಾಹಸಕ್ಕೆ ಕೈಹಾಕಿದೆ. ಆದರೆ, ಈ ಭೀಕರ ಪ್ರತಿದಾಳಿಯ ಕುರಿತು ಅಮೆರಿಕದ ಪೆಂಟಗನ್ ಆಗಲಿ ಅಥವಾ ಬಹರೇನ್ ಹಾಗೂ ಕುವೈತ್ ಸರ್ಕಾರಗಳಾಗಲಿ ತಕ್ಷಣಕ್ಕೆ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ತೈಲ ಮಾರುಕಟ್ಟೆ ಈಗಾಗಲೇ ತಲ್ಲಣಗೊಂಡಿದ್ದು, ಜಾಗತಿಕ ಆರ್ಥಿಕತೆಯ ಮೇಲೆ ಇದರ ದುಷ್ಪರಿಣಾಮ ಬೀರುವ ಆತಂಕ ಹೆಚ್ಚಾಗಿದೆ.