ಟೆಹ್ರಾನ್ ಎಪ್ರಿಲ್ 19: ಅಮೆರಿಕದ ಒತ್ತಡದ ತಂತ್ರಗಳಿಗೆ ಇರಾನ್ ಬಗ್ಗುವುದಿಲ್ಲ ಮತ್ತು ಯುದ್ಧಭೂಮಿಯಲ್ಲಿ ಅಮೆರಿಕ ಸೋಲೊಪ್ಪಿಕೊಂಡಿದೆ ಎಂದು ಇರಾನ್ ಸಂಸತ್ತಿನ ಸ್ಪೀಕರ್ ಮೊಹಮ್ಮದ್ ಬಘರ್ ಘಾಲಿಬಾಫ್ ಗುಡುಗಿದ್ದಾರೆ. “ಇರಾನ್ನಲ್ಲಿ ಆಡಳಿತ ಬದಲಿಸುವ ಅಥವಾ ನಮ್ಮ ಕ್ಷಿಪಣಿ ಸಾಮರ್ಥ್ಯವನ್ನು ನಾಶಮಾಡುವ ಡೊನಾಲ್ಡ್ ಟ್ರಂಪ್ ಕನಸು ಈಡೇರುವುದಿಲ್ಲ, ಇರಾನ್ ಎಂದರೆ ವೆನೆಜುವೆಲಾ ಅಲ್ಲ” ಎಂದು ಅವರು ವ್ಯಂಗ್ಯವಾಡಿದ್ದಾರೆ.

ಇರಾನ್ನ ವಾಯುಪಡೆ, ನೌಕಾಪಡೆ ಮತ್ತು ಭೂಸೇನೆಯನ್ನು ನಾಶಪಡಿಸಲು ಶತ್ರು ರಾಷ್ಟ್ರಗಳು ನಡೆಸಿದ ಎಲ್ಲಾ ಪ್ರಯತ್ನಗಳು ವಿಫಲವಾಗಿವೆ ಎಂದು ಘಾಲಿಬಾಫ್ ಪ್ರತಿಪಾದಿಸಿದ್ದಾರೆ. “ಹಾರ್ಮುಜ್ ಜಲಸಂಧಿಯನ್ನು ಬಲವಂತವಾಗಿ ತೆರೆಸುವ ಅಥವಾ ನಮ್ಮ ಮೇಲೆ ದಾಳಿ ಮಾಡುವ ಉದ್ದೇಶದಲ್ಲಿ ಶತ್ರುಗಳು ಸೋತಿದ್ದಾರೆ. ಎದುರಾಳಿಯ ಬಳಿ ಹಣ ಮತ್ತು ಶಸ್ತ್ರಾಸ್ತ್ರಗಳಿದ್ದರೂ, ಅವರ ತಂತ್ರಗಾರಿಕೆ ದೋಷಪೂರಿತವಾಗಿದೆ” ಎಂದು ಅವರು ಟೀಕಿಸಿದ್ದಾರೆ.
ಅಮೆರಿಕವು ತನ್ನ ಗುರಿ ಸಾಧಿಸಲು ಅಸಾಧ್ಯವಾದಾಗ ಈಗ ಮಧ್ಯವರ್ತಿಗಳ ಮೂಲಕ ಸಂದೇಶ ಕಳುಹಿಸಲು ಮುಂದಾಗಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. “ಎಚ್ಚರಿಕೆ ಮತ್ತು ಗಡುವುಗಳನ್ನು ನೀಡುವ ಮೂಲಕ ನಮ್ಮನ್ನು ಹೆದರಿಸಲು ಸಾಧ್ಯವಾಗದ ಅಮೆರಿಕ, ಈಗ ಸಂಧಾನದ ಹಾದಿ ಹುಡುಕುತ್ತಿದೆ” ಎಂದು ಅವರು ಹೇಳಿದ್ದಾರೆ.
ಅಮೆರಿಕವು ಇರಾನ್ನ ಕೆಲವು ಬೇಡಿಕೆಗಳನ್ನು ಪೂರೈಸಲು ಒಪ್ಪಿಕೊಂಡಿರುವ ಹಿನ್ನೆಲೆಯಲ್ಲಿ ಇರಾನ್ ತಾತ್ಕಾಲಿಕ ಕದನ ವಿರಾಮಕ್ಕೆ ಸಮ್ಮತಿಸಿದೆ. “ಯುದ್ಧಭೂಮಿಯಲ್ಲಿ ನಾವು ವಿಜಯಶಾಲಿಗಳು ಎಂಬುದನ್ನು ಟ್ರಂಪ್ ಮನಗಂಡಿದ್ದಾರೆ. ಇರಾನ್ ಅಳವಡಿಸಿಕೊಂಡಿರುವ ಅಸಾಮಾನ್ಯ ಯುದ್ಧ ತಂತ್ರವು ಪ್ರಬಲ ಎದುರಾಳಿಯನ್ನು ಯಶಸ್ವಿಯಾಗಿ ಎದುರಿಸಲು ಸಹಾಯ ಮಾಡಿದೆ” ಎಂದು ಘಾಲಿಬಾಫ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅಮೆರಿಕದೊಂದಿಗೆ ಕೆಲವು ವಿಷಯಗಳಲ್ಲಿ ಒಮ್ಮತ ಮೂಡಿದ್ದರೂ, ಪ್ರಮುಖ ರಾಜತಾಂತ್ರಿಕ ವಿಷಯಗಳಲ್ಲಿ ಇನ್ನೂ ಭಿನ್ನಾಭಿಪ್ರಾಯಗಳು ಉಳಿದಿವೆ ಎಂದು ಸ್ಪೀಕರ್ ಸ್ಪಷ್ಟಪಡಿಸಿದ್ದಾರೆ. ಇದು ಪಶ್ಚಿಮ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯ ಪ್ರಕ್ರಿಯೆಯು ಇನ್ನೂ ಕಠಿಣ ಹಾದಿಯಲ್ಲಿದೆ ಎಂಬುದನ್ನು ಸೂಚಿಸುತ್ತದೆ.
ಹೊರ್ಮುಜ್ ಜಲಸಂಧಿಯನ್ನು ಶುಕ್ರವಾರವಷ್ಟೇ ಎಲ್ಲ ಹಡಗುಗಳ ಸಂಚಾರಕ್ಕೆ ಮುಕ್ತಗೊಳಿಸಿದ್ದ ಇರಾನ್, ಶನಿವಾರದಿಂದ ಮತ್ತೆ ಈ ಮಾರ್ಗದಲ್ಲಿ ಹಡಗುಗಳ ಸಂಚಾರ ನಿರ್ಬಂಧಿಸಿದೆ.
ಜಲಸಂಧಿ ದಾಟಲು ಯತ್ನಿಸಿದ ಒಟ್ಟು 14 ಹಡಗುಗಳನ್ನು ಇರಾನ್ ಸೇನೆ ಶನಿವಾರ ತಡೆದಿದೆ. ಇದರಲ್ಲಿ ಭಾರತದ ಧ್ವಜ ಹೊಂದಿದ್ದ ಏಳು ಹಡಗುಗಳು ಸೇರಿವೆ. ಭಾರತದ ಎರಡು ಹಡಗುಗಳ ಮೇಲೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕೋರ್ (ಐಆರ್ಜಿಸಿ) ಗುಂಡಿನ ದಾಳಿ ನಡೆಸಿದೆ. ಒಂದು ಹಡಗಿನ ಕಿಟಕಿ ಗಾಜು ಒಡೆದಿದೆ. ಇನ್ನೊಂದು ಹಡಗಿಗೆ ಆಗಿರುವ ಹಾನಿಯ ಬಗ್ಗೆ ನಿಖರ ಮಾಹಿತಿ ತಿಳಿದುಬಂದಿಲ್ಲ.