ಇರಾನ್ , ಮಾರ್ಚ್ 18: ಇಸ್ರೇಲ್ ನ ವೈಮಾನಿಕ ದಾಳಿಯಲ್ಲಿ ಇರಾನ್ ಗುಪ್ತಚರ ಸಚಿವ ಎಸ್ಮಾಯಿಲ್ ಖತೀಬ್ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಇರಾನ್ನ ಗುಪ್ತಚರ ಸಚಿವ ಮೃತಪಟ್ಟಿದ್ದಾರೆ. ಗುಪ್ತಚರ ಇಲಾಖೆಯ ಎಸ್ಮಾಯಿಲ್ ಖತೀಬ್ ಅವರ ಹತ್ಯೆಯನ್ನು ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ದೃಢಪಡಿಸಿದ್ದಾರೆ. ಈ ದಾಳಿಯನ್ನು ಅವರು “ಹೇಡಿತನದ ಹತ್ಯೆ” ಎಂದು ಕರೆದಿದ್ದಾರೆ. ಇಸ್ರೇಲ್ ತನ್ನ ಪಡೆಗಳು ಟೆಹ್ರಾನ್ ಮೇಲೆ ರಾತ್ರಿಯಿಡೀ ನಡೆಸಿದ ವೈಮಾನಿಕ ದಾಳಿ ನಡೆಸಿ ಸಚಿವ ಎಸ್ಮಾಯಿಲ್ ಅವರನ್ನು ಹತ್ಯೆ ಮಾಡಿವೆ ಎಂದು ಹೇಳಿಕೆ ನೀಡಿದ ಬೆನ್ನಲ್ಲೇ ಇರಾನ್ ಕೂಡ ಈ ಬಗ್ಗೆ ದೃಢಪಡಿಸಿದೆ.
ಇರಾನ್ನಾದ್ಯಂತ ಇತ್ತೀಚೆಗೆ ನಡೆದ ಪ್ರತಿಭಟನೆಗಳಲ್ಲಿ ಎಸ್ಮಾಯಿಲ್ ಖತೀಬ್ ಮಹತ್ವದ ಪಾತ್ರ ವಹಿಸಿದ್ದಾರೆ. ಪ್ರತಿಭಟನಾಕಾರರ ಬಂಧನ ಮತ್ತು ಹತ್ಯೆ ಸೇರಿದಂತೆ ಪ್ರಮುಖ ನಿರ್ಧಾರಗಳಲ್ಲಿ ಅವರು ಪಾತ್ರ ವಹಿಸಿದ್ದರು. ಅವರು ಇಸ್ರೇಲಿಗಳು ಮತ್ತು ಅಮೆರಿಕನ್ನರ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಮುನ್ನಡೆಸಿದ್ದಾರೆ ಎಂದು ಐಡಿಎಫ್ ಹೇಳಿತ್ತು.