ಟೆಹ್ರಾನ್/ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ‘ಶಾಂತಿ ಒಪ್ಪಂದ’ದ ಹೇಳಿಕೆಯನ್ನು ಇರಾನ್ ತೀವ್ರವಾಗಿ ವ್ಯಂಗ್ಯವಾಡಿದೆ. ಟ್ರಂಪ್ ಅವರ ಆಶಾವಾದವನ್ನು ಪರ್ಶಿಯನ್ ನುಡಿಗಟ್ಟಿನ ಮೂಲಕ ಅಪಹಾಸ್ಯ ಮಾಡಿರುವ ಇರಾನ್, ಇದು ವಾಸ್ತವಕ್ಕೆ ದೂರವಾದ ಮಾತು ಎಂದು ಸ್ಪಷ್ಟಪಡಿಸಿದೆ.

ಇರಾನ್ ರಾಷ್ಟ್ರ ಪ್ರಸಾರಕ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ಬ್ರಾಡ್ಕಾಸ್ಟಿಂಗ್ ಪರ್ಷಿಯನ್ ಗಾದೆಯನ್ನು ಬಳಸಿಕೊಂಡು ಟ್ರಂಪ್ ಅವರನ್ನು ಅಪಹಾಸ್ಯ ಮಾಡಿದೆ. “ಕ್ಯಾಮೆಲ್ ಡ್ರೀಮ್ಸ್ ಆಫ್ ಕಾಟನ್ಸೀಡ್” (ಒಂಟೆಯು ಹತ್ತಿ ಬೀಜವನ್ನು ತಿನ್ನುವ ಕನಸು ಕಾಣುವುದು) ಎಂಬ ಪರ್ಶಿಯನ್ ಗಾದೆಯನ್ನು ಬಳಸಿದೆ. ಅಸಾಧ್ಯವಾದುದನ್ನು ಅಥವಾ ಹಗಲುಗನಸನ್ನು ಕಾಣುವವರನ್ನು ಟೀಕಿಸಲು ಈ ನುಡಿಗಟ್ಟನ್ನು ಬಳಸಲಾಗುತ್ತದೆ. ಟ್ರಂಪ್ ಅವರ ಒಪ್ಪಂದದ ಹೇಳಿಕೆಗಳು ಕೇವಲ ಖಾಲಿ ಮಾತುಗಳು ಎಂಬುದು ಟೆಹ್ರಾನ್ನ ಅಭಿಪ್ರಾಯವಾಗಿದೆ.
ಇತ್ತೀಚೆಗೆ ಟ್ರಂಪ್ ಅವರು ಅಮೆರಿಕಾ-ಇರಾನ್ ಮಾತುಕತೆಗಳು ಸಕಾರಾತ್ಮಕ ಹಂತದಲ್ಲಿದ್ದು, ಶೀಘ್ರದಲ್ಲೇ ಶಾಂತಿ ಒಪ್ಪಂದ ಸಾಧ್ಯ ಎಂದು ಹೇಳಿದ್ದರು. ಆದರೆ, ಇದನ್ನು ಸಂಪೂರ್ಣವಾಗಿ ತಳ್ಳಿಹಾಕಿರುವ ಇರಾನ್ ಅಧಿಕಾರಿಗಳು, ಯಾವುದೇ ಮಹತ್ವದ ಪ್ರಗತಿ ನಡೆದಿಲ್ಲ ಎಂದಿದ್ದಾರೆ. ಪರಮಾಣು ಶಸ್ತ್ರಾಸ್ತ್ರ ಮತ್ತು ಆರ್ಥಿಕ ನಿರ್ಬಂಧಗಳ ವಿಚಾರದಲ್ಲಿ ಉಭಯ ದೇಶಗಳ ನಡುವಿನ ಬಿಕ್ಕಟ್ಟು ಮುಂದುವರಿದಿದ್ದು, ಈ ವ್ಯಂಗ್ಯಭರಿತ ಪ್ರತಿಕ್ರಿಯೆಯು ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಸಂಕೀರ್ಣಗೊಳಿಸುವ ಸಾಧ್ಯತೆಯಿದೆ.