ಟೆಹ್ರಾನ್, ಏಪ್ರಿಲ್ 09: ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಘೋಷಿಸಲಾಗಿದ್ದ ಎರಡು ವಾರಗಳ ಕದನ ವಿರಾಮ ಒಪ್ಪಂದವು ಜಾರಿಯಾದ 24 ಗಂಟೆಗಳಲ್ಲೇ ಹಳಿ ತಪ್ಪುವ ಲಕ್ಷಣಗಳು ಕಂಡುಬಂದಿವೆ. ಇರಾನ್ನ ಪ್ರಮುಖ ತೈಲ ಸಂಸ್ಕರಣಾಗಾರದ ಮೇಲೆ ನಡೆದ ನಿಗೂಢ ದಾಳಿ ಮತ್ತು ಅದಕ್ಕೆ ಪ್ರತಿಯಾಗಿ ಅರಬ್ ರಾಷ್ಟ್ರಗಳ ಮೇಲೆ ಇರಾನ್ ನಡೆಸಿದ ವಾಗ್ದಾಳಿಗಳು ಪಶ್ಚಿಮ ಏಷ್ಯಾದಲ್ಲಿ ಮತ್ತೆ ಭೀತಿ ಮತ್ತು ಅಸ್ಥಿರತೆಯನ್ನು ನಿರ್ಮಿಸಿವೆ.

ಮಂಗಳವಾರವಷ್ಟೇ ಅಮೆರಿಕ, ಇರಾನ್ ಮತ್ತು ಇಸ್ರೇಲ್ ನಡುವೆ ಶಾಂತಿ ಕಾಪಾಡುವ ನಿಟ್ಟಿನಲ್ಲಿ ಎರಡು ವಾರಗಳ ಒಪ್ಪಂದವಾಗಿತ್ತು. ಆದರೆ ಬುಧವಾರ, ಅಂದರೆ ಏಪ್ರಿಲ್ 8ರಂದು ಸ್ಥಳೀಯ ಸಮಯ ಸುಮಾರು 10 ಗಂಟೆಗೆ ಇರಾನ್ನ ಲಾವನ್ ದ್ವೀಪದಲ್ಲಿರುವ ರಾಷ್ಟ್ರೀಯ ತೈಲ ಸಂಸ್ಕರಣಾ ಮತ್ತು ವಿತರಣಾ ಕಂಪನಿಯ ಘಟಕದ ಮೇಲೆ ದಾಳಿ ನಡೆದಿದೆ. ಈ ವಿನಾಶಕಾರಿ ದಾಳಿಯಿಂದ ಸಂಸ್ಕರಣಾಗಾರಕ್ಕೆ ಭಾರಿ ಹಾನಿಯಾಗಿದ್ದು, ಅಗ್ನಿಶಾಮಕ ದಳವು ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿದೆ. ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಈ ದಾಳಿಯನ್ನು “ಹೇಡಿಗಳ ಕೃತ್ಯ” ಎಂದು ಜರೆದಿರುವ ಇರಾನ್, ಇದರ ಹಿಂದೆ ಇಸ್ರೇಲ್ ಕೈವಾಡವಿದೆ ಎಂದು ಗಂಭೀರ ಆರೋಪ ಮಾಡಿದೆ. ಆದರೆ, ಇಸ್ರೇಲ್ ರಕ್ಷಣಾ ಪಡೆ (IDF) ಈ ಆರೋಪವನ್ನು ತಳ್ಳಿಹಾಕಿದ್ದು, ಲಾವನ್ ದ್ವೀಪದ ದಾಳಿಯಲ್ಲಿ ತನ್ನ ಯಾವುದೇ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸಿದೆ.
ಸಂಸ್ಕರಣಾಗಾರದ ಮೇಲಿನ ದಾಳಿಯಿಂದ ಕೆರಳಿದ ಇರಾನ್, ಕದನ ವಿರಾಮದ ನಿಯಮಗಳನ್ನು ಗಾಳಿಗೆ ತೂರಿ ಅರಬ್ ರಾಷ್ಟ್ರಗಳಾದ ಕುವೈತ್ ಮತ್ತು ಯುಎಇ ಮೇಲೆ ಭಾರಿ ಪ್ರಮಾಣದ ಕ್ಷಿಪಣಿ ಹಾಗೂ ಡ್ರೋನ್ ದಾಳಿ ನಡೆಸಿದೆ. ಕುವೈತ್ನ ಪ್ರಮುಖ ತೈಲ ಸ್ಥಾವರಗಳನ್ನು ಗುರಿಯಾಗಿಸಿ ಬಂದ 28 ಡ್ರೋನ್ಗಳನ್ನು ಆ ದೇಶದ ಸೇನೆಯು ಯಶಸ್ವಿಯಾಗಿ ತಡೆಹಿಡಿದಿದೆ. ಅತ್ತ ಯುಎಇ ಮೇಲೆ ಇರಾನ್ 17 ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ 35 ಡ್ರೋನ್ಗಳನ್ನು ಹಾರಿಸಿದ್ದು, ಅಬುಧಾಬಿ ಮತ್ತು ದುಬೈನ ಜನನಿಬಿಡ ಪ್ರದೇಶಗಳಲ್ಲಿ ಕ್ಷಿಪಣಿಗಳ ಅವಶೇಷಗಳು ಬಿದ್ದಿರುವುದು ಜಾಗತಿಕ ಮಟ್ಟದಲ್ಲಿ ಆತಂಕಕ್ಕೆ ಕಾರಣವಾಗಿದೆ. ಯುಎಇ ವಾಯು ರಕ್ಷಣಾ ವ್ಯವಸ್ಥೆಯು ಈ ದಾಳಿಯನ್ನು ಸಮರ್ಥವಾಗಿ ಎದುರಿಸಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.