ಪುತ್ತೂರು ಡಿಸೆಂಬರ್ 10: ದೀಪಾವಳಿ ಕಾರ್ಯಕ್ರಮದಲ್ಲಿ ಸಂದರ್ಭ ದ್ವೇಷ ಭಾಷಣದ ಆರೋಪದಲ್ಲಿ ದಾಖಲಾಗಿದ್ದ ಪ್ರಕರಣದಲ್ಲಿ RSS ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಗೆ ಅವರಿಗೆ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಪುತ್ತೂರು ತಾಲೂಕಿನ ಉಪ್ಪಳಿಗೆ ಎಂಬಲ್ಲಿ ಅ.22ರಂದು ನಡೆದ ದೀಪೋತ್ಸವ ಮತ್ತು ಗೋಪೂಜೆಯಲ್ಲಿ ಭಾಗವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಕೋಮು ಪ್ರಚೋದನಾತ್ಮಕವಾಗಿ ಭಾಷಣ ಮಾಡಿರುವ ಬಗ್ಗೆ ಈಶ್ವರಿ ಪದ್ಮುಂಜ ಅವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿದ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ಮನೆಗೆ ನೋಟೀಸ್ ಜಾರಿಗೊಳಿಸಿದ್ದರು. ಬಳಿಕದ ಬೆಳವಣಿಗೆಯಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ನಿರೀಕ್ಷಣಾ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅ. 27ರಂದು ನಡೆದ ವಿಚಾರಣೆಯಲ್ಲಿ ನ್ಯಾಯಾಲಯವು ಬಲವಂತದ ಕ್ರಮ ತೆಗೆದುಕೊಳ್ಳದಂತೆ ಮಧ್ಯಂತರ ಆದೇಶ ನೀಡಿ ಪೂರ್ಣ ವಿಚಾರಣೆಯನ್ನು ಅ. 29ಕ್ಕೆ ಮುಂದೂಡಿತ್ತು. ಅ.29ರಂದು ದೂರುದಾರೆ ಈಶ್ವರಿ ಪದ್ಮುಂಜ ಅವರ ಪರ ವಕೀಲರು ಪುತ್ತೂರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯಕ್ಕೆ ಬಿಎನ್‌ಎಸ್‌ಎಸ್ ಸೆಕ್ಷನ್ 338, 339 ಅಡಿ ವಾದ ಮಂಡಿಸಲು ಅವಕಾಶ ಕೋರಿ ಅರ್ಜಿ ಸಲ್ಲಿಸಿದ್ದರು. ಅಂದು ನ್ಯಾಯಾಲಯ ಅರ್ಜಿಯ ವಿಚಾರಣೆಯನ್ನು ಹಲವು ಬಾರಿ ಮುಂದೂಡಿತ್ತು. ಇದೀಗ ನ್ಯಾಯಾಲಯ ಜಾಮೀನು ನೀಡಿದೆ. ಆರ್ ಎಸ್ ಎಸ್ ಮುಖಂಡ ಪ್ರಭಾಕರ್ ಭಟ್ ಪರ ಖ್ಯಾತ ವಕೀಲ ಮಹೇಶ್ ಕಜೆ ವಾದ ಮಂಡಿಸಿದ್ದರು.

ಜಾಮೀನು ಪ್ರಕ್ರಿಯೆ ಕುರಿತು ಮಾಹಿತಿ ನೀಡಿದ ವಕೀಲ ಮಹೇಶ್ ಕಜೆ, ಡಾ.ಪ್ರಭಾಕರ ಭಟ್ ದೀಪೋತ್ಸವದ ವೇಳೆ ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎನ್ನುವ ಆರೋಪದಡಿ ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರಿನ ಹಿನ್ನಲೆಯಲ್ಲಿ ಅವರ ವಿರುದ್ಧ ಕ್ರೈಂ ಸಂಖ್ಯೆ118/2025 ನಂತೆ ಎಫ್ಐಆರ್ ದಾಖಲಿಸಲಾಗಿತ್ತು.
ಈ ಹಿನ್ನಲೆಯಲ್ಲಿ ಪ್ರಭಾಕರ್ ಭಟ್ ಪರವಾಗಿ ಪುತ್ತೂರಿನ ಐದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದೆವು, ಈ ವೇಳೆ ಅವರು ಹಲವು ಸಾಮಾಜಿಕ ಕೆಲಸಗಳಲ್ಲಿ, ವಿದ್ಯಾಸಂಸ್ಥೆಗಳಲ್ಲಿ ತೊಡಗಿದ್ದರು. ಅಲ್ಲದೆ ಅವರು ಹಿರಿಯ ನಾಗರಿಕರೂ ಆಗಿದ್ದ ಕಾರಣಕ್ಕೆ ಅವರಿಗೆ ಮದ್ಯಂತರ ಜಾಮೀನು ನೀಡುವಂತೆ ಕೋರಲಾಗಿತ್ತು. ಈ ವೇಳೆ ನ್ಯಾಯಾಲಯ ಆರಂಭದಲ್ಲೇ ಅವರಿಗೆ ಮಧ್ಯಂತರ ರಿಲೀಫ್ ನೀಡಿತ್ತು. ಈ ಮಧ್ಯೆ ದೂರುದಾರೆ ಪರವಾಗಿ ವಕೀಲರನ್ನೂ ನೇಮಿಸಲು ಅವಕಾಶ ನೀಡಲಾಗಿತ್ತು. ದೂರುದಾರರ ವಕೀಲರು ಮತ್ತು ಪ್ರೋಸಿಕ್ಯೂಷನ್ ಪ್ರಭಾಕರ ಭಟ್ ಗೆ ಜಾಮೀನು ನೀಡದಂತೆ ಆಕ್ಷೇಪಿಸಿತ್ತು. ಎಲ್ಲಾ ವಿಚಾರಗಳನ್ನು ಪರಿಶೀಲಿಸಿದ ನ್ಯಾಯಾಲಯ ಅವರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಹಾಗಾಗಿ ಕಲ್ಲಡ್ಕ ಪ್ರಭಾಕರ ಭಟ್ ಗೆ ನ್ಯಾಯಾಲಯ ಅವರ ಸತ್ಯಕ್ಕೆ , ಧರ್ಮಕ್ಕೆ ನ್ಯಾಯವನ್ನು ಕೊಟ್ಟಿದೆ ಎಂದರು.

ಸಾಮಾಜಿಕ ಜಾಲತಾಣದಲ್ಲಿ ಪ್ರಭಾಕರ ಭಟ್ ವಿರುದ್ಧ ದೂರು ದಾಖಲಾದ ಬಳಿಕ ಪರದಾಡುವ ಸ್ಥಿತಿ ತಲುಪಿದ್ದರು ಎನ್ನುವ ವಿಚಾರ ಹರಿದಾಡುತ್ತಿತ್ತು. ಆದರೆ ಯಾವತ್ತೂ ಪರದಾಡಿಲ್ಲ, ನಾವು ನ್ಯಾಯಾಲಯದ ಮುಂದೆಯೂ ಈ ವಿಚಾರವನ್ನು ತಿಳಿಸಿದ್ಧೇವೆ. ಅಧಿಕೃತ ದಾಖಲೆ ಪತ್ರಗಳನ್ನೂ ಸಲ್ಲಿಸಿದ್ದೇವೆ. ಪ್ರಭಾಕರ ಭಟ್ ನ್ಯಾಯಕ್ಕೆ ಸದಾ ಹೋರಾಡುವ ವ್ಯಕ್ತಿ, ಧರ್ಮಾಧಾರಿತ ನ್ಯಾಯಕ್ಕೆ ಹೋರಾಡುವ ವ್ಯಕ್ತಿ, ಅಲ್ಲದೆ ಕಾನೂನಿಗೆ ಗೌರವ ಕೊಡುವ ವ್ಯಕ್ತಿ. ಆದರೆ ಪ್ರೋಸಿಕ್ಯೂಷನ್ ಪ್ರಭಾಕರ ಭಟ್ ವಿರುದ್ಧ ಹಲವು ದೂರು ದಾಖಲಾಗಿದೆ ಎಂದು ನ್ಯಾಯಾಲಯದ ಮುಂದೆ ಹೇಳಿತ್ತು.
ಆದರೆ ಎಲ್ಲಾ ಕೇಸುಗಳಿಗೆ ಅವರಿಗೆ ಉಚ್ಛ ನ್ಯಾಯಾಲಯದಿಂದಲೂ ರಕ್ಷಣೆ ದೊರೆತಿತ್ತು. ಪ್ರಭಾಕರ ಭಟ್ ಅವರನ್ನ ಧಮನಿಸುವ ಪ್ರಯತ್ನ ನಿರಂತರ ನಡೆದಿತ್ತು. ಅಲ್ಲದೆ ಅವರ ಹೋರಾಟದ ಕಿಚ್ಚನ್ನು ನಂದಿಸುವ ಪ್ರಯತ್ನವೂ ಆಗಿದೆ. ನ್ಯಾಯಾಲಯ ಅವರಿಗೆ ನ್ಯಾಯಾಲಯದ ಚೌಕಟ್ಟಿನಲ್ಲಿ ನೀಡಬಹುದಾದ ಎಲ್ಲಾ ರಕ್ಷಣೆಯನ್ನು ನೀಡಿದೆ,
ಈ ಪ್ರಕರಣದಲ್ಲೂ ಪರದಾಡುವ ಸ್ಥಿತಿಯೇ ಇರಲಿಲ್ಲ, ಪ್ರಕರಣ ದಾಖಲಾಗುವ ಸಂದರ್ಭದಲ್ಲೇ ಅವರ ವಿರುದ್ಧ ಬಲವಂತದ ಕ್ರಮ ಕೈಗೊಳ್ಳಬಾರದು ಎಂದು ಆದೇಶ ನೀಡಿತ್ತು. ಪ್ರಭಾಕರ ಭಟ್ ಕಾನೂನಿಗೆ ಗೌರವ ನೀಡಿ ಪೋಲೀಸ್ ತನಿಖೆಗೂ ಸಹಕರಿಸಿದ್ದಾರೆ. ದುರಂತವೇನಂದರೆ ಅವರು ತನಿಖೆಯ ಪ್ರಕ್ರಿಯೆಗೆ ಸ್ಪಂದಿಸಿದ ಸಂದರ್ಭ ಅವರನ್ನು ನಾವು ಬಗ್ಗಿಸಿದೆವು ಎಂದು ಕೆಲವರು ಬಿಂಬಿಸಿದ್ದರು, ಆ ರೀತಿಯ ಆರೋಪ ಬಂದಾಗ ನಾವು ಸುಮ್ಮನಿದ್ದೆವು, ನಮಗೆ ನ್ಯಾಯ ದೇವತೆಯ ಬಗ್ಗೆ ಭರವಸೆಯಿತ್ತು. ನಮಗೆ ಅಲ್ಲಿ ಅದಕ್ಕೆ ಪರಿಹಾರ ಸಿಗುತ್ತೆ ಎನ್ನುವ ವಿಶ್ವಾಸವಿತ್ತು, ಅದಕ್ಕೇ ನಾವು ಅವರಂತೆ ಮೀಡಿಯಾ ಟ್ರಯಲ್ ಗೆ ಹೋಗಿಲ್ಲ. ಸಂವಿಧಾನಾತ್ಮಕ ಹೋರಾಟವನ್ನು ಮಾಡಿದ್ದೇವೆ, ನ್ಯಾಯಾಲಯ ಸಾಮಾನ್ಯವಾಗಿ ಹಾಕುವ ಷರತ್ತನ್ನು ಮಾತ್ರ ಹಾಕಿದೆ ಎಂದು ವಕೀಲ ಮಹೇಶ್ ಕಜೆ ಮಾಹಿತಿ ನೀಡಿದ್ದಾರೆ.



