ಮಂಗಳೂರು ಜನವರಿ 30: ಬಸ್ ನಿಲ್ದಾಣಗಳಲ್ಲಿ ಪ್ರಯಾಣಿಕರ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರ್ ಜಿಲ್ಲಾ ಕಳ್ಳನನ್ನು ಮಂಗಳೂರು ಬರ್ಕೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತನನ್ನು ಅಂತರ್ ಜಿಲ್ಲೆ ಕಳ್ಳನಾದ ಮಹಮ್ಮದ್ ಇಮ್ರಾನ್ ಎನ್.ಎಮ್ ಪ್ರಾಯ 44 ಎಂದು ಗುರುತಿಸಲಾಗಿದ್ದು, ಆರೋಪಿಯನ್ನು ಮಂಗಳೂರು ರೈಲ್ವೆ ಸ್ಟೇಷನ್ ನಲ್ಲಿ ಅರೆಸ್ಟ್ ಮಾಡಲಾಗಿದೆ. ಬಂಧಿತನಿಂದ ಒಟ್ಟು ರೂ 6,47,920/- ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ರೂ.5000/- ನಗದು ಹಣ ವಶಕ್ಕೆ ಪಡೆಯಲಾಗಿದೆ.

ಬರ್ಕೆ ಪೊಲೀಸ್ ಠಾಣಾ ವ್ಯಾಪ್ತಿಯ ಬಿಜೈ ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದಲ್ಲಿ ದಿನಾಂಕ: 23-01-2026 ರಂದು ಸಂಜೆ ಸಮಯ ಸುಮಾರು 7-00 ಗಂಟೆಗೆ ಪ್ರಾಯಸ್ಥ ಇಬ್ಬರು ಮಹಿಳೆಯರು ಮತ್ತು ಹಿರಿಯ ನಾಗರಿಕರು ಬೆಂಗಳೂರಿಗೆ ಹೋಗುವ ಬಸ್ಸಿನಲ್ಲಿ ಸುಮಾರು 45 ಗ್ರಾಂ ಚಿನ್ನಾಭರಣ ಹಾಗೂ ರೂ.20,000/- ನಗದು ಹಣ ಇರುವ ಟ್ರಾಯಲಿ ಬ್ಯಾಗ್ ನ್ನು ಇಟ್ಟು ಕುಳಿತುಕೊಂಡಿದ್ದ ಸಮಯ ಯಾರೋ ಕಳ್ಳರು ಚಿನ್ನಾಭರಣಗಳಿರುವ ಬ್ಯಾಗ್ ನ್ನು ಕಳವು ಮಾಡಿಕೊಂಡ ಹೋದ ಬಗ್ಗೆ ಬರ್ಕೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿತ್ತು.
ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬರ್ಕೆ ಪೊಲೀಸರು ದಿನಾಂಕ:28-01-2026 ರಂದು ಮಂಗಳೂರು ಸೆಂಟ್ರಲ್ ರೈಲ್ವೇ ಸ್ಟೇಷನ್ ನ ಬಳಿಯಲ್ಲಿ ದಸ್ತಗಿರಿ ಮಾಡಿ ಆರೋಪಿತನಿಂದ ಒಟ್ಟು ರೂ 6,47,920/- ಬೆಲೆಬಾಳುವ 46.28 ಗ್ರಾಂ ತೂಕದ ಚಿನ್ನದ ಒಡವೆಗಳನ್ನು ರೂ.5000/- ನಗದು ಹಣವನ್ನು ಸ್ವಾಧೀನಪಡಿಸಲಾಗಿದೆ. ದಸ್ತಗಿರಿ ಮಾಡಿದ ಆರೋಪಿಯನ್ನು ಮಾನ್ಯ ನ್ಯಾಯಾಲಯಕ್ಕೆ ದಿನಾಂಕ:29-01-2026 ರಂದು ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಸದ್ರಿ ಆರೋಪಿಯು ಬಸ್ಸು ನಿಲ್ದಾಣಗಳಲ್ಲಿ ಬೆಲೆಬಾಳುವ ಸೊತ್ತುಗಳಿರುವ ಬ್ಯಾಗ್ ಗಳನ್ನು ಕಳ್ಳತನ ಮಾಡುವ ರೂಢಿಗತ ಆರೋಪಿಯಾಗಿದ್ದು ಹಾಗೂ ಈತನ ಮೇಲೆ ಒಟ್ಟು 11 ಪ್ರಕರಣಗಳು ದಾಖಲಾಗಿರುತ್ತದೆ. ಆರೋಪಿತನ ಮೇಲೆ ದುದ್ದ ಪೊಲೀಸ್ ಠಾಣೆಯಲ್ಲಿ-1, ಕೊಮನೂರು ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ-1, ಹಾಸನ ನಗರ ಪೊಲೀಸ್ ಠಾಣೆಯಲ್ಲಿ-1, ಚೆನ್ನರಾಯಪಟ್ಟಣ ನಗರ ಠಾಣೆಯಲ್ಲಿ-1, ಮೈಸೂರು ದೇವರಾಜ ನಗರ ಪೊಲೀಸ್ ಠಾಣೆಯಲ್ಲಿ-1 ಬ್ಯಾಗ್ ಕಳ್ಳತನ ಪ್ರಕರಣಗಳು ದಾಖಲಗಿದ್ದು, ಹಾಸನ ಜಿಲ್ಲೆ ಶಾಂತಿಗ್ರಾಮ ಪೊಲೀಸ್ ಠಾಣೆಯಲ್ಲಿ-1, ಹಾಸನ ಬಡಾವಣೆ ಪೊಲೀಸ್ ಠಾಣೆಯಲ್ಲಿ -2, ಹಾಸನ ಜಿಲ್ಲೆ ದುದ್ದ ಪೊಲೀಸ್ ಠಾಣೆಯಲ್ಲಿ-1 ಮನೆ ಕಳ್ಳತನ ಪ್ರಕರಣ ದಾಖಲಾಗಿರುತ್ತದೆ.
ಅಲ್ಲದೇ ಆರೋಪಿತನು ಹಾಸನ ಜಿಲ್ಲೆಯ ಮನೆಕಳವು ಪ್ರಕರಣದಲ್ಲಿ ಮಾನ್ಯ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ಮಾನ್ಯ ನ್ಯಾಯಾಲಯಕ್ಕೆ ಪ್ರಕರಣದ ವಿಚಾರಣೆಗೆ ಹಾಜರಾಗದೇ ಇದ್ದುದರಿಂದ ಮಾನ್ಯ ನ್ಯಾಯಾಲಯವು ಆರೋಪಿತನ ವಿರುದ್ದ ವಾರೆಂಟ್ ನ್ನು ಕೂಡಾ ಹೊರಡಿಸಿರುತ್ತಾರೆ.