ನವದೆಹಲಿ, ಮಾರ್ಚ್ 28: ಆಂಧ್ರಪ್ರದೇಶದ ವಿಶಾಖಪಟ್ಟಣದಿಂದ ದೆಹಲಿಗೆ ಆಗಮಿಸುತ್ತಿದ್ದ ಇಂಡಿಗೋ ಸಂಸ್ಥೆಯ ವಿಮಾನವೊಂದು ಎಂಜಿನ್ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ಪೈಲಟ್ಗಳ ಸಮಯಪ್ರಜ್ಞೆಯಿಂದಾಗಿ ವಿಮಾನದಲ್ಲಿದ್ದ ಎಲ್ಲಾ 161 ಪ್ರಯಾಣಿಕರು ಮತ್ತು ಸಿಬ್ಬಂದಿ ವರ್ಗದವರು ಅಪಾಯದಿಂದ ಪಾರಾಗಿದ್ದಾರೆ.

ವಿಶಾಖಪಟ್ಟಣದಿಂದ ದೆಹಲಿಗೆ ಹೊರಟಿದ್ದ ‘6E 579’ ಸಂಖ್ಯೆಯ ಬೋಯಿಂಗ್ 737 ವಿಮಾನವು ದೆಹಲಿಯ ಸಮೀಪ ಬರುತ್ತಿದ್ದಂತೆ ಅದರ ಒಂದು ಎಂಜಿನ್ನಲ್ಲಿ ತಾಂತ್ರಿಕ ವೈಫಲ್ಯ ಕಾಣಿಸಿಕೊಂಡಿದೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೈಲಟ್, ವಿಮಾನ ನಿಲ್ದಾಣದ ಏರ್ ಟ್ರಾಫಿಕ್ ಕಂಟ್ರೋಲ್ (ATC) ಗೆ ಮಾಹಿತಿ ನೀಡಿ ತುರ್ತು ಭೂಸ್ಪರ್ಶಕ್ಕೆ ಅನುಮತಿ ಕೋರಿದರು. ಬೆಳಿಗ್ಗೆ 10:39ಕ್ಕೆ ವಿಮಾನ ನಿಲ್ದಾಣದಲ್ಲಿ ‘ಪೂರ್ಣ ತುರ್ತು ಪರಿಸ್ಥಿತಿ’ (Full Emergency) ಘೋಷಿಸಲಾಯಿತು.
ಮುನ್ನೆಚ್ಚರಿಕಾ ಕ್ರಮವಾಗಿ ರನ್ವೇ ಸಂಖ್ಯೆ 28ರ ಬಳಿ ಅಗ್ನಿಶಾಮಕ ದಳದ ವಾಹನಗಳು ಮತ್ತು ಆಂಬ್ಯುಲೆನ್ಸ್ಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿತ್ತು. ಬೆಳಿಗ್ಗೆ 10:50ಕ್ಕೆ ವಿಮಾನವು ಯಾವುದೇ ಅನಾಹುತವಿಲ್ಲದೆ ಸುಗಮವಾಗಿ ಭೂಸ್ಪರ್ಶ ಮಾಡಿತು. ನಂತರ ಅಗ್ನಿಶಾಮಕ ಸಿಬ್ಬಂದಿಯ ನೆರವಿನೊಂದಿಗೆ ಪ್ರಯಾಣಿಕರನ್ನು ಸುರಕ್ಷಿತವಾಗಿ ಕೆಳಗಿಳಿಸಿ ಟರ್ಮಿನಲ್ಗೆ ಸ್ಥಳಾಂತರಿಸಲಾಯಿತು.
ಈ ವಿಮಾನವು ಮೂಲತಃ ಟರ್ಕಿಯ ‘ಕೊರೆಂಡನ್ ಏರ್ಲೈನ್ಸ್’ಗೆ ಸೇರಿದ್ದಾಗಿದ್ದು, ಇಂಡಿಗೋ ಸಂಸ್ಥೆಯು ಇದನ್ನು ‘ವೆಟ್ ಲೀಸ್’ (ಬಾಡಿಗೆ) ಒಪ್ಪಂದದ ಆಧಾರದ ಮೇಲೆ ಕಾರ್ಯಾಚರಣೆಗೆ ಬಳಸುತ್ತಿತ್ತು. ಸುಮಾರು 15 ವರ್ಷ ಹಳೆಯದಾದ ಈ ವಿಮಾನದಲ್ಲಿ ಉಂಟಾದ ತಾಂತ್ರಿಕ ದೋಷದ ಬಗ್ಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ತನಿಖೆಗೆ ಆದೇಶಿಸಿದೆ.
“ತಾಂತ್ರಿಕ ದೋಷ ಕಂಡುಬಂದ ತಕ್ಷಣ ನಿಗಧಿತ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಅವರಿಗೆ ಪರ್ಯಾಯ ವಿಮಾನದ ವ್ಯವಸ್ಥೆ ಮಾಡಲಾಗಿದೆ,” ಎಂದು ಇಂಡಿಗೋ ಸಂಸ್ಥೆಯ ಅಧಿಕೃತ ವಕ್ತಾರರು ತಿಳಿಸಿದ್ದಾರೆ. ಘಟನೆಯಿಂದಾಗಿ ಕೆಲ ಕಾಲ ವಿಮಾನ ನಿಲ್ದಾಣದ ಕಾರ್ಯಾಚರಣೆಯಲ್ಲಿ ವ್ಯತ್ಯಯ ಉಂಟಾಗಿತ್ತು.