ಮಂಗಳೂರು ಡಿಸೆಂಬರ್ 01: ಮುಂಬೈ ಮತ್ತು ಕರಾವಳಿಗರ ನಡುವಿನ ಸಂಚಾರಕ್ಕೆ ಇದೀಗ ಹೊಸ ಸೇವೆ ಪ್ರಾರಂಭವಾಗಿದೆ. ಬಜಪೆಯ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳ ನಡುವೆ ಡಿಸೆಂಬರ್ 25 ರಂದು ನೇರ ವಿಮಾನಯಾನ ಸೇವೆ ಆರಂಭವಾಗಲಿದೆ.


ಇಂಡಿಗೊ ವಿಮಾನಯಾನ ಸಂಸ್ಥೆಯ ವಿಮಾನಗಳು ದಿನದಲ್ಲಿ ನಾಲ್ಕು ಬಾರಿ ಹಾಗೂ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಒಂದು ವಿಮಾನ ದಿನದಲ್ಲಿ ಒಮ್ಮೆ ಮಂಗಳೂರು – ಗ್ರೀಫ್‌ ಫೀಲ್ಡ್‌ ವಿಮಾನನಿಲ್ದಾಣ ಎಂಬ ಹೆಗ್ಗಳಿಕೆಗೆ ಪಾತ್ರವಾದ ನವಿ ಮುಂಬೈ ನಡುವೆ ಸಂಚಾರ ನಡೆಸಲಿವೆ.

ನವಿ ಮುಂಬೈನಿಂದ ಮಂಗಳೂರಿಗೆ (6ಇ 865) ಬೆಳಗ್ಗೆ 10.40ಕ್ಕೆ ಬಂದಿಳಿಯುವ ವಿಮಾನವು ಮಧ್ಯಾಹ್ನ 12.10ಕ್ಕೆ ನವಿಮುಂಬೈಗೆ ತೆರಳಲಿದೆ. ಸೋಮವಾರ ಮತ್ತು ಗುರುವಾರ ನವಿ ಮುಂಬೈನಿಂದ ಮಂಗಳೂರಿಗೆ ಸಂಜೆ 4.05ಕ್ಕೆ ಬಂದಿಳಿಯುವ ವಿಮಾನವು ಮಂಗಳೂರು – ನವಿ ಮುಂಬೈ (6ಇ 866) ನಡುವೆ ಸಂಜೆ 5.45ಕ್ಕೆ ಇಲ್ಲಿಂದ ನವಿಮುಂಬೈಗೆ ತೆರಳಲಿದೆ.

ಮಂಗಳವಾರ, ಬುಧವಾರ, ಶುಕ್ರವಾರ, ಶನಿವಾರ, ಭಾನುವಾರ ನವಿ ಮುಂಬೈನಿಂದ ಮಂಗಳೂರಿಗೆ ಮಧ್ಯಾಹ್ನ 12.40ಕ್ಕೆ ಬಂದಿಳಿಯುವ ವಿಮಾನ (6E 866) ಮಧ್ಯಾಹ್ನ 2.20ಕ್ಕೆ ಇಲ್ಲಿಂದ ನವಿಮುಂಬೈಗೆ ಹೊರಡಲಿದೆ. ಈ ಹೊಸ ವಿಮಾನ ಸೇವೆಯಿಂದ ವ್ಯಾಪಾರಿಗಳು, ಪ್ರವಾಸಿಗರು ಹಾಗೂ ಕರಾವಳಿ-ಮುಂಬೈ ನಡುವೆ ಸಂಚರಿಸುವ ಸಾವಿರಾರು ಮಂದಿಗೆ ಅನುಕೂಲವಾಗಲಿದೆ. ಮಂಗಳೂರು ವಿಮಾನ ನಿಲ್ದಾಣದಿಂದ ಬೆಂಗಳೂರು, ಚೆನ್ನೈ, ದೆಹಲಿ, ಹೈದರಾಬಾದ್, ಮುಂಬೈ (ಛತ್ರಪತಿ ಶಿವಾಜಿ) ಹಾಗೂ ತಿರುವನಂತಪುರ ಸೇರಿ ದೇಶದ ಆರು ನಗರಗಳಿಗೆ ತಾಣಗಳಿಗೆ ವಿಮಾನ ಸಂಪರ್ಕವಿದೆ. ನವಿ ಮುಂಬೈ ಮಂಗಳೂರಿನಿಂದ ನೇರ ವಿಮಾನ ಸಂಪರ್ಕ ಏಳನೇ ದೇಸಿ ವಿಮಾನನಿಲ್ದಾಣ ಎಂದು ಮಂಗಳೂರು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ

Share Information