ನ್ಯೂಯಾರ್ಕ್, ಮಾರ್ಚ್ 3: ಅಮೆರಿಕದ Texas ರಾಜ್ಯದ Austinನಲ್ಲಿ ಇರಾನ್ ಧ್ವಜದ ಚಿಹ್ನೆ ಧರಿಸಿದ್ದ ದುಷ್ಕರ್ಮಿಯೊಬ್ಬ ನಡೆಸಿದ ಗುಂಡಿನ ದಾಳಿಯಲ್ಲಿ ಭಾರತೀಯ ಮೂಲದ ವಿದ್ಯಾರ್ಥಿನಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಇನ್ನೂ 14 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತ ವಿದ್ಯಾರ್ಥಿನಿಯನ್ನು ಸವಿತಾ ಶಾನ್ (21) ಎಂದು ಗುರುತಿಸಲಾಗಿದೆ. ಅವರು University of Texas at Austinನಲ್ಲಿ ಅರ್ಥಶಾಸ್ತ್ರ ಮತ್ತು ನಿರ್ವಹಣಾ ಮಾಹಿತಿ ವ್ಯವಸ್ಥೆ ವಿಷಯಗಳಲ್ಲಿ ಬ್ಯಾಚುಲರ್ ಪದವಿ ಅಭ್ಯಾಸ ಮಾಡುತ್ತಿದ್ದರು. ಈ ವರ್ಷ ಪದವಿ ಪೂರ್ಣಗೊಳಿಸುವ ನಿರೀಕ್ಷೆಯಲ್ಲಿದ್ದರು. ಅಲ್ಲದೆ, ಅವರು ಆಸ್ಟಿನ್ ತಮಿಳು ಸಂಗಮ್ನಲ್ಲಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದರು.
ದಾಳಿಕೋರನನ್ನು ಸೆನೆಗಲ್ ಮೂಲದ ವಲಸೆಗಾರ ನ್ಡಿಯಾಗಾ ಡಯಾಗ್ನೆ (53) ಎಂದು ಗುರುತಿಸಲಾಗಿದೆ. ಈತನಿಗೆ ಭಯೋತ್ಪಾದಕ ಚಟುವಟಿಕೆಗಳ ಸಂಪರ್ಕವಿರುವ ಶಂಕೆ ವ್ಯಕ್ತವಾಗಿದ್ದು, ಈ ಕುರಿತು ತನಿಖೆ ಮುಂದುವರಿದಿದೆ ಎಂದು Federal Bureau of Investigation (ಎಫ್ಬಿಐ)ಯ ಅಧಿಕಾರಿಗಳು ತಿಳಿಸಿದ್ದಾರೆ.
ವಿದ್ಯಾರ್ಥಿನಿಯ ಸಾವನ್ನು University of Texas at Austin ಅಧ್ಯಕ್ಷ ಜಿಮ್ ಡೇವಿಸ್ ದೃಢಪಡಿಸಿದ್ದಾರೆ. ಕ್ಯಾಂಪಸ್ ಸಮುದಾಯಕ್ಕೆ ಕಳುಹಿಸಿದ ಇಮೇಲ್ನಲ್ಲಿ ಅವರು, “ಈ ಆಘಾತಕಾರಿ ಘಟನೆ ನಮಗೆ ಅತೀವ ದುಃಖ ತಂದಿದೆ. ನಾವು ಆಕೆಯನ್ನು ಸದಾ ಸ್ಮರಿಸುತ್ತೇವೆ,” ಎಂದು ತಿಳಿಸಿದ್ದಾರೆ. ಇರಾನ್ ಮೇಲಿನ ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆದಿರಬಹುದೆಂಬ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದು, ವಿವಿಧ ಆಯಾಮಗಳಲ್ಲಿ ತನಿಖೆ ಮುಂದುವರಿಸಲಾಗಿದೆ.