ಮಂಗಳೂರು ಜೂನ್ 30: ಪ್ರಕ್ಷುಬ್ಧಗೊಂಡಿದ್ದ ಅರಬ್ಬಿ ಸಮುದ್ರದ ಭೀಕರ ಅಲೆಗಳ ಹೊಡೆತಕ್ಕೆ ಸಿಲುಕಿ ಮುಳುಗುವ ಹಂತ ತಲುಪಿದ್ದ ಮೀನುಗಾರಿಕಾ ದೋಣಿಯಲ್ಲಿದ್ದ ಆರು ಮಂದಿ ಮೀನುಗಾರರನ್ನು ಭಾರತೀಯ ಕರಾವಳಿ ರಕ್ಷಣಾ ಪಡೆ (ICG) ಅತ್ಯಂತ ತ್ವರಿತ ರಕ್ಷಣಾ ಕಾರ್ಯಾಚರಣೆಯ ಮೂಲಕ ಸುರಕ್ಷಿತವಾಗಿ ರಕ್ಷಿಸಿದೆ. ಜೂನ್ 29ರ ಸೋಮವಾರದಂದು ಮಂಗಳೂರು ಸಮೀಪದ ನಡುಸಮುದ್ರದಲ್ಲಿ ಈ ರಕ್ಷಣಾ ಕಾರ್ಯಾಚರಣೆ ನಡೆದಿದೆ.

‘ಐಎಫ್ಬಿ ಮಂಜು ಮಾತಾ’ ಎಂಬ ಹೆಸರಿನ ಮೀನುಗಾರಿಕಾ ದೋಣಿಯು ಆರು ಮಂದಿ ಮೀನುಗಾರರೊಂದಿಗೆ ಜೂನ್ 29 ರಂದು ಮೀನುಗಾರಿಕೆಯಲ್ಲಿ ತೊಡಗಿದ್ದಾಗ, ಹವಾಮಾನ ವೈಪರೀತ್ಯದಿಂದಾಗಿ ಸಮುದ್ರ ಭೋರ್ಗರೆಯಲಾರಂಭಿಸಿತ್ತು. ಈ ವೇಳೆ ದೋಣಿಗೆ ಅಲೆಗಳು ಅಪ್ಪಳಿಸಿದ ಪರಿಣಾಮವಾಗಿ ಬೋಟ್ ತೀವ್ರವಾಗಿ ಹಾನಿಗೊಳಗಾಗಿತ್ತು. ನೋಡನೋಡುತ್ತಿದ್ದಂತೆಯೇ ದೋಣಿಯ ಒಳಗೆ ಸಮುದ್ರದ ನೀರು ನುಗ್ಗಲು ಪ್ರಾರಂಭವಾಗಿ, ಬೋಟ್ ಮುಳುಗುವ ಲಕ್ಷಣಗಳು ಕಾಣಿಸಿಕೊಂಡಿದ್ದವು. ಇದರಿಂದ ಆತಂಕಗೊಂಡ ಮೀನುಗಾರರು ತಕ್ಷಣವೇ ರಕ್ಷಣೆಗಾಗಿ ಕರಾವಳಿ ರಕ್ಷಣಾ ಪಡೆಯ ನೆರವು ಯಾಚಿಸಿದ್ದರು.
ಮಾಹಿತಿ ಸಿಗುತ್ತಿದ್ದಂತೆಯೇ ತಕ್ಷಣವೇ ಕಾರ್ಯಪ್ರವೃತ್ತರಾದ ಕರಾವಳಿ ರಕ್ಷಣಾ ಪಡೆಯ ಸಿಬ್ಬಂದಿ, ತಮ್ಮ ಅತ್ಯಾಧುನಿಕ ‘ಸಾಚೇತ್’ (ICGS Sachet) ಸಮರ ನೌಕೆಯೊಂದಿಗೆ ನಿಖರವಾದ ಲೊಕೇಶನ್ ಪತ್ತೆಹಚ್ಚಿ ಸ್ಥಳಕ್ಕೆ ಧಾವಿಸಿದರು. ಸಮುದ್ರ ಅತ್ಯಂತ ಪ್ರಕ್ಷುಬ್ಧವಾಗಿದ್ದರಿಂದ ಮೀನುಗಾರರ ದೋಣಿಯ ಹತ್ತಿರ ನೌಕೆಯನ್ನು ಕೊಂಡೊಯ್ಯುವುದು ಅಪಾಯಕಾರಿಯಾಗಿತ್ತು. ಈ ಸವಾಲಿನ ಸಂದರ್ಭದಲ್ಲಿ ಕರಾವಳಿ ರಕ್ಷಣಾ ಪಡೆಯು ಅತ್ಯಾಧುನಿಕ ‘ರಿಮೋಟ್-ಚಾಲಿತ ಜೀವರಕ್ಷಕ ಸಾಧನಗಳನ್ನು’ (Remote-Controlled Lifebuoys) ಸಮುದ್ರಕ್ಕೆ ಇಳಿಸಿ, ಅದರ ಮೂಲಕ ಸಂಕಷ್ಟದಲ್ಲಿದ್ದ ಎಲ್ಲಾ ಆರು ಮಂದಿ ಮೀನುಗಾರರನ್ನು ಯಶಸ್ವಿಯಾಗಿ ನೌಕೆಯೊಳಗೆ ಎಳೆದುಕೊಂಡಿತು.
ರಕ್ಷಿಸಲ್ಪಟ್ಟ ಮೀನುಗಾರರಿಗೆ ನೌಕೆಯಲ್ಲೇ ಪ್ರಥಮ ಚಿಕಿತ್ಸೆ ಹಾಗೂ ಆಹಾರ ಒದಗಿಸಲಾಗಿದೆ. ಸದ್ಯ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಹಾಗೂ ಮುಂದಿನ ಕಾನೂನು ಪ್ರಕ್ರಿಯೆಗಳಿಗಾಗಿ ಅವರನ್ನು ನವ ಮಂಗಳೂರು ಬಂದರಿಗೆ (NMPT) ಕರೆತರಲಾಗುತ್ತಿದ್ದು, ಸ್ಥಳೀಯ ಕರಾವಳಿ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಕರಾವಳಿ ರಕ್ಷಣಾ ಪಡೆಯ ಮೂಲಗಳು ತಿಳಿಸಿವೆ. ಭೀಕರ ಗಾಳಿ-ಮಳೆಯ ನಡುವೆಯೂ ಭಾರತೀಯ ಕರಾವಳಿ ರಕ್ಷಣಾ ಪಡೆ ತೋರಿದ ಸಮಯಪ್ರಜ್ಞೆ ಮತ್ತು ಹೈ-ಟೆಕ್ ಸಾಹಸಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.