ನವದೆಹಲಿ, ಏಪ್ರಿಲ್ 0 7 : ಅಮೇರಿಕಾ ಇರಾನ್ ಮೇಲೆ ಭೀಕರ ಯುದ್ದದ ವಾರ್ನಿಂಗ್ ನೀಡಿದ ಬೆನ್ನಲ್ಲೇ ಇದೀಗ ಕೇಂದ್ರ ಸರಕಾರ ಇರಾನ್ನಲ್ಲಿರುವ ಭಾರತೀಯ ಪ್ರಜೆಗಳ ಸುರಕ್ಷತೆಯ ದೃಷ್ಟಿಯಿಂದ ಸೂಚನೆಗಳನ್ನು ನೀಡಿದೆ. ಮುಂದಿನ 48 ಗಂಟೆಗಳ ಕಾಲ ಇರಾನ್ನಲ್ಲಿರುವ ಭಾರತೀಯರು ತಮ್ಮ ನಿವಾಸ ಅಥವಾ ಸುರಕ್ಷಿತ ಸ್ಥಳಗಳಿಂದ ಹೊರಬರಬಾರದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯವು ತುರ್ತು ಮಾರ್ಗಸೂಚಿಯನ್ನು ಹೊರಡಿಸಿದೆ.

ಟೆಹ್ರಾನ್ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ತನ್ನ ಪ್ರಜೆಗಳಿಗೆ ಗರಿಷ್ಠ ಜಾಗರೂಕತೆ ವಹಿಸುವಂತೆ ಸೂಚಿಸಿದೆ. ವಿಶೇಷವಾಗಿ ಮಿಲಿಟರಿ ನೆಲೆಗಳು, ವಿದ್ಯುತ್ ಸ್ಥಾವರಗಳು ಮತ್ತು ಪ್ರಮುಖ ಆಯಕಟ್ಟಿನ ಸರ್ಕಾರಿ ಕಟ್ಟಡಗಳ ಬಳಿ ಸುಳಿಯಬಾರದೆಂದು ತಾಕೀತು ಮಾಡಲಾಗಿದೆ. ತುರ್ತು ಸಂದರ್ಭ ಎದುರಾದಲ್ಲಿ ಅಗತ್ಯವಿರುವ ಆಹಾರ, ನೀರು ಮತ್ತು ಔಷಧಿಗಳನ್ನು ಕನಿಷ್ಠ ನಾಲ್ಕೈದು ದಿನಗಳ ಕಾಲ ಸಂಗ್ರಹಿಸಿಟ್ಟುಕೊಳ್ಳಲು ಸಲಹೆ ನೀಡಲಾಗಿದೆ. ಅಲ್ಲದೆ, ಇದುವರೆಗೆ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದ ಭಾರತೀಯರು ತಕ್ಷಣವೇ ‘ಮದದ್’ ಪೋರ್ಟಲ್ ಮೂಲಕ ವಿವರಗಳನ್ನು ಸಲ್ಲಿಸಲು ಕೋರಲಾಗಿದೆ.
ಇರಾನ್ನಲ್ಲಿರುವ ಸುಮಾರು 9,000ಕ್ಕೂ ಹೆಚ್ಚು ಭಾರತೀಯರ ರಕ್ಷಣೆಗಾಗಿ ಕೇಂದ್ರ ಸರ್ಕಾರವು ವಿಶೇಷ ಸಹಾಯವಾಣಿಗಳನ್ನು ಸಕ್ರಿಯಗೊಳಿಸಿದ್ದು, ರಾಯಭಾರ ಕಚೇರಿಯ ಅಧಿಕಾರಿಗಳು ಸ್ಥಳೀಯ ಆಡಳಿತದೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ.