ದುರ್ಗ್, ಏಪ್ರಿಲ್ 25: ಛತ್ತೀಸಗಢದ ದುರ್ಗ್ ಜಿಲ್ಲೆಯಲ್ಲಿ ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ಭೀಕರ ಹತ್ಯಾಕಾಂಡವೊಂದು ನಡೆದಿದೆ. ಪೊಲೀಸ್ ಕಾನ್ಸ್ಟೆಬಲ್ ಒಬ್ಬರ ಪತ್ನಿ ಮತ್ತು ಒಂಬತ್ತು ವರ್ಷದ ಮಗನನ್ನು ಮಹಿಳೆಯೊಬ್ಬಳು ಚಾಕುವಿನಿಂದ ಇರಿದು ಕ್ರೂರವಾಗಿ ಕೊಲೆ ಮಾಡಿರುವ ಘಟನೆ ಬೋರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.

ಆರೋಪಿ ಸರೋಜಿನಿ ಭಾರದ್ವಾಜ್ (25) ಮತ್ತು ಕಾನ್ಸ್ಟೆಬಲ್ ಲಲಿತೇಶ್ ಯಾದವ್ ಕಳೆದ ಎರಡು ವರ್ಷಗಳಿಂದ ಪರಿಚಿತರಾಗಿದ್ದರು. ಘಟನೆಯ ದಿನ ಆರೋಪಿ ತನ್ನ ಕುಟುಂಬದ ಊರಿಗೆ ಪ್ರಯಾಣಿಸಲು ಟಿಕೆಟ್ ಖರೀದಿಸಲು ರೈಲ್ವೆ ನಿಲ್ದಾಣಕ್ಕೆ ಹೋಗಿದ್ದಳು. ಬಳಿಕ ಅಲ್ಲಿಂದ ನೇರವಾಗಿ ದುರ್ಗ್ನಲ್ಲಿರುವ ಕಾನ್ಸ್ಟೆಬಲ್ ನಿವಾಸಕ್ಕೆ ತೆರಳಿದ್ದಾಳೆ. ಲಲಿತೇಶ್ ಮನೆಯಲ್ಲಿ ಇಲ್ಲದ ಸಮಯ ನೋಡಿ ಪತ್ನಿ ರೀನಾ ಯಾದವ್ ಅವರೊಂದಿಗೆ ಜಗಳ ಆರಂಭಿಸಿದ್ದಾಳೆ. ಈ ವೇಳೆ ಆಕ್ರೋಶಗೊಂಡ ಸರೋಜಿನಿ, ಏಕಾಏಕಿ ಚಾಕು ತೆಗೆದು ರೀನಾ ಅವರ ಮೇಲೆ ಮನಸೋಇಚ್ಛೆ ದಾಳಿ ಮಾಡಿದ್ದಾಳೆ.
ರೀನಾ ಅವರ ಮೇಲೆ ಹಲ್ಲೆ ನಡೆಸಿದ ನಂತರ, ಮನೆಯಲ್ಲಿ ನಿದ್ದೆ ಮಾಡುತ್ತಿದ್ದ 9 ವರ್ಷದ ಬಾಲಕ ಆದಿತ್ಯನ ಮೇಲೂ ಸರೋಜಿನಿ ಅಮಾನವೀಯವಾಗಿ ಚಾಕುವಿನಿಂದ ಇರಿದಿದ್ದಾಳೆ. ತನ್ನ ಮಕ್ಕಳನ್ನು ಬಿಟ್ಟುಬಿಡುವಂತೆ ತಾಯಿ ರೀನಾ ಎಷ್ಟೇ ಬೇಡಿಕೊಂಡರೂ ಹಂತಕಿ ಕರುಣೆ ತೋರಿಲ್ಲ. ದಾಳಿಯ ವೇಳೆ ಮನೆಯಲ್ಲಿದ್ದ ಇಬ್ಬರು ಹೆಣ್ಣುಮಕ್ಕಳ ಪೈಕಿ ಒಬ್ಬಳು ಸ್ನಾನಗೃಹದಲ್ಲಿ ಅಡಗಿಕೊಂಡರೆ, ಮತ್ತೊಬ್ಬಳು ಪ್ರಾಣಭಯದಿಂದ ಮನೆಯಿಂದ ಹೊರಗೋಡಿ ನೆರೆಹೊರೆಯವರಿಗೆ ಮಾಹಿತಿ ನೀಡಿದ್ದಾಳೆ.
ಮನೆಯಿಂದ ಕಿರುಚಾಟ ಕೇಳಿ ಸ್ಥಳಕ್ಕೆ ಧಾವಿಸಿದ ನೆರೆಹೊರೆಯವರು, ರಕ್ತಸಿಕ್ತ ಚಾಕುವಿನೊಂದಿಗೆ ಪಲಾಯನ ಮಾಡಲು ಯತ್ನಿಸುತ್ತಿದ್ದ ಸರೋಜಿನಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ತೀವ್ರ ರಕ್ತಸ್ರಾವದಿಂದಾಗಿ ರೀನಾ ಯಾದವ್ ಮತ್ತು ಮಗ ಆದಿತ್ಯ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಪುತ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಸರೋಜಿನಿ ಕಾನ್ಸ್ಟೆಬಲ್ ಲಲಿತೇಶ್ ಅವರೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಆಕೆ ಲಲಿತೇಶ್ ಅವರೊಂದಿಗೆ ಅವರ ಮನೆಯಲ್ಲೇ ವಾಸಿಸಲು ಹಠ ಹಿಡಿದಿದ್ದಳು. ಈ ವಿಚಾರವಾಗಿ ನಡೆದ ದ್ವೇಷವೇ ಈ ಭೀಕರ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿದೆ. ದುರ್ಗ್ ಎಸ್ಪಿ ವಿಜಯ್ ಅಗ್ರವಾಲ್ ಸ್ಥಳಕ್ಕೆ ಭೇಟಿ ನೀಡಿದ್ದು, ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.