ಕೊರೊನಾ ವಿರುದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಬಿಡುಗಡೆ

ಮಂಗಳೂರು ಮೇ.23: ಕೊರೊನಾ ವಿರುದ್ದ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಯುರ್ವೇದ ಔಷಧಿ ಇಂದು ಮಂಗಳೂರಿನಲ್ಲಿ ಬಿಡುಗಡೆಯಾಗಿದೆ. ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತ ಆಯುರ್ವೇದ ಔಷಧಿ ಆಯುಷ್ ಕ್ವಾಥ್ ನ್ನು ಸಂಸದ ನಳಿನ್ ಕುಮಾರ್ ಕಟೀಲ್ ಬಿಡುಗಡೆಗೊಳಿಸಿದರು.

ನಂತರ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಕೇಂದ್ರ ಸರಕಾರದ ಆಯುಷ್ ಇಲಾಖೆಯಿಂದ ಪ್ರಮಾಣೀಕೃತಗೊಂಡಿರುವ ಈ ಆಯುರ್ವೇದ ಔಷಧಿ ಆಯುಷ್ ಕ್ವಾಥ್ ಜನರ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೋವಿಡ್ 19 ವಿರುದ್ಧ ದೇಹವನ್ನು ಅಣಿಗೊಳಿಸುತ್ತದೆ. ಭಾರತ ಮಾತ್ರವಲ್ಲ ಜಗತ್ತಿನ ಬೇರೆ ಬೇರೆ ರಾಷ್ಟ್ರಗಳು ಆಯುರ್ವೇದ ಔಷಧಗಳ ಮಹತ್ವವನ್ನು ಅರಿತಿವೆ. ಎಸ್ ಡಿಪಿ ಮತ್ತು ಆಯುರ್ ವಿವೇಕ್ ಸಂಸ್ಥೆ ಹೊರತಂದಿರುವ ಈ ಔಷಧದ ಬಳಕೆಯಿಂದ ಈಗ ನಮ್ಮ ಮುಂದಿರುವ ಭಯಾನಕ ರೋಗವನ್ನು ಹಿಮ್ಮೆಟ್ಟಿಸುವ ರೋಗ ನಿರೋಧಕ ಶಕ್ತಿ ದೇಹದಲ್ಲಿ ಹೆಚ್ಚಾಗಲಿ. ಜನರು ಇದರ ಸದುಪಯೋಗ ಮಾಡಿಕೊಳ್ಳಲಿ ಎಂದು ನಳಿನ್ ಕುಮಾರ್ ಹಾರೈಸಿದರು.

ಔಷಧಿ ತಯಾರಿಸಿದ ಎಸ್ ಡಿಪಿ ರೆಮೆಡಿಸ್ ಮತ್ತು ರಿಸರ್ಚ್ ಸೆಂಟರ್ ಇದರ ಪ್ರವರ್ತಕರಾದ ಡಾ. ಹರಿಕೃಷ್ಣ ಪಾಣಾಜೆಯವರು ಮಾತನಾಡಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ತುಳಸಿ, ಶುಂಠಿ, ದಾಲ್ಚಿನಿ, ಕರಿಮೆಣಸು ಮಿಶ್ರಿತ ಆಯುಷ್ ಕ್ವಾಥ್ ಕಷಾಯದ ಸೇವನೆಯ ಪರಿಣಾಮವನ್ನು ಉದಾಹರಣೆಯೊಂದಿಗೆ ವಿವರಿಸಿದರು. ಕ್ವಾರಂಟೈನ್ ಗೊಂಡಿದ್ದ ಸುಮಾರು 6000 ಮಂದಿಗೆ ಆಯುಷ್ ಇಲಾಖೆಯ ವತಿಯಿಂದ ಈ ಕಷಾಯವನ್ನು ಸೇವಿಸಲು ನೀಡಲಾಯಿತು. ಅದರಲ್ಲಿ ಅನೇಕ ಮಂದಿಗೆ ಕೋವಿಡ್ 19 ವೈರಾಣು ಇರುವುದು ಪ್ರಾರಂಭಿಕ ಹಂತದಲ್ಲಿ ಪತ್ತೆಯಾಗಿತ್ತು. ಆದರೆ ಈ ಕಷಾಯದ ನಿರ್ದಿಷ್ಟ ಸೇವನೆಯಿಂದ ಹಲವಾರು ರೋಗಿಗಳು ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.

ಆಯುಷ್ ಕ್ವಾಥ್ ಬಿಡುಗಡೆಗೊಳಿಸಿ ಮಾತನಾಡಿದ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಎಸ್ ಡಿಪಿ ಮತ್ತು ನಾಡಿನ ಪ್ರಖ್ಯಾತ ಆಯುರ್ವೇದ ಉತ್ಪನ್ನಗಳ ಮಳಿಗೆ ಆಯುರ್ ವಿವೇಕ್ ಇದನ್ನು ರಾಜ್ಯ, ಹೊರರಾಜ್ಯಗಳಿಗೂ ಪೂರೈಸಿ ಜನರ ಜೀವದ ಜೊತೆ ಆಟವಾಡುತ್ತಿರುವ ಕೋವಿಡ್ 19 ಮಹಾಮಾರಿಯನ್ನು ಹೊಡೆದೋಡಿಸಲು ಈ ಕಷಾಯ ಪೂರಕವಾಗಿ ಕೆಲಸ ಮಾಡಲಿ ಎಂದು ಹಾರೈಸಿದರು.