Connect with us

    LATEST NEWS

    ಅಕ್ರಮ ಮರಳು ಗಣಿಗಾರಿಕೆಗೆ ಕಡಿವಾಣ ಹಾಕಿ:  ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ

    ಮಂಗಳೂರು ನವೆಂಬರ್ 27 : ಕರಾವಳಿ ನಿಯಂತ್ರಣ ವಲಯ   ಪ್ರದೇಶದಲ್ಲಿ ಮರಳು ದಿಬ್ಬಗಳ ತೆರವು ಹಾಗೂ ಲೋಡಿಂಗ್ ಅನ್ನು ಮಾನವ ಶ್ರಮದಿಂದಲೇ ನಿರ್ವಹಿಸಬೇಕು, ಯಂತ್ರೋಪಕರಣ ಬಳಸಿದರೆ ಅಂತಹವರ ಪರವಾನಿಗೆಯನ್ನು ರದ್ದುಪಡಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಎಚ್ಚರಿಸಿದರು. ಇಂದು ನಗರದ ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯಲ್ಲಿ ಅನಧಿಕೃತ ಉಪ ಖನಿಜ ಗಣಿಗಾರಿಕೆ , ಸಾಗಾಣಿಕೆ, ಮತ್ತು ದಾಸ್ತಾನು ಚಟುವಟಿಕೆಗಳನ್ನು ತಡೆಗಟ್ಟುವ ಬಗ್ಗೆ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

    ಮರಳು ತೆಗೆಯಲು ಯಾವುದೇ ಯಂತ್ರೋಪಕರಣಗಳು ಹಾಗೂ ಯಂತ್ರಾಧಾರಿತ ದೋಣಿಗಳನ್ನು ಬಳಸಬಾರದು, ಮರಳು ದಕ್ಕೆಯನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ತೆಗೆದ ಮರಳನ್ನು ಬೇರೆ ಕಡೆ ಶೇಖರಣೆ ಮಾಡಬಾರದು ಎಂದ ಅವರು, ಇರುವೈಲು ಹಾಗೂ ಅತಿಕಾರಿ ಬೆಟ್ಟು ಪ್ರದೇಶದಲ್ಲಿ ಅತೀ ಹೆಚ್ಚು ಅಕ್ರಮ ಮರಳು ಸಾಗಾಟ ಮಾಡುತ್ತಿರುವ ಬಗ್ಗೆ ದೂರುಗಳ ಬರುತ್ತಿದ್ದು ಆ ವ್ಯಾಪ್ತಿಯ ಸಂಬಂಧಪಟ್ಟ ಅಧಿಕಾರಿಗಳು ಇದರ ವಿರುದ್ಧ ಕ್ರಮ ಕೈಗೊಳ್ಳಬೇಕು, ನಿರ್ಲಕ್ಷ್ಯ ತೋರಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದರು.

    ನೇತ್ರಾವತಿ, ಫಲ್ಗುಣಿ ಮತ್ತು ಶಾಂಭವಿ ನದಿಗಳಲ್ಲಿ ಗುರುತಿಸಿರುವ ಒಟ್ಟು 13 ಮರಳು ದಿಬ್ಬಗಳನ್ನು ತೆರವುಗೊಳಿಸುವಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದ್ದು ಇದುವರೆಗೆ ಒಟ್ಟು 80 ಮಂದಿಗೆ ತಾತ್ಕಾಲಿಕ ಪರವಾನಿಗೆಯನ್ನು ವಿತರಿಸಲಾಗಿದೆ ಹಾಗೂ 80,000 ಮೆಟ್ರಿಕ್ ಟನ್ ಮರಳನ್ನು  ತೆರವುಗೊಳಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

    ಜಿಲ್ಲೆಯ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಗುರುತಿಸಿರುವ ಮರಳು ದಿಬ್ಬಗಳಿಂದ ತೆರವುಗೊಳಿಸುವಂತಹ ಮರಳನ್ನು ಜಿಲ್ಲೆಯಲ್ಲಿನ ಸಾರ್ವಜನಿಕರಿಗೆ ಹಾಗೂ ಸರ್ಕಾರಿ ಮತ್ತು ಇತರೆ ಕಾಮಗಾರಿಗಳಿಗೆ ನಿರ್ದಿಷ್ಟ ಬೆಲೆಯಲ್ಲಿ ಪೂರೈಕೆ ಮಾಡುವ ಸಲುವಾಗಿ ಮರಳು ದಕ್ಕೆ ಪ್ರದೇಶದಲ್ಲಿ ಪ್ರತಿ ಟನ್‍ಗೆ ಲೋಡಿಂಗ್ ರೂ. 500 ರಂತೆ 1 ಲೋಡ್  ಮರಳಿಗೆ ರೂ. 5,000. ದಕ್ಕೆ ಪ್ರದೇಶದಿಂದ 20 ಕಿ.ಮೀ. ವ್ಯಾಪ್ತಿಯೊಳಗೆ 1 ಲೋಡ್ ಮರಳು ಸಾಗಾಟ ಮಾಡಲು ರೂ.2,000, ಹಾಗೂ ಮರಳು ದಕ್ಕೆ ಪ್ರದೇಶದಿಂದ 20 ಕಿ.ಮೀ. ವ್ಯಾಪ್ತಿಯ ನಂತರ 1 ಲೋಡ್ ಮರಳನ್ನು ಸಾಗಾಟ ಮಾಡಿದರೆ ಪ್ರತಿ ಕಿ.ಮೀ.ಗೆ ರೂ. 50 ರಂತೆ ದರ ನಿಗದಿಪಡಿಸಲಾಗಿದೆ ಎಂದರು.

    ಸಾರ್ವಜನಿಕರು ತಮ್ಮ ಅಗತ್ಯತೆಗಳಿಗೆ ಅನುಸಾರವಾಗಿ ಉತ್ತಮ ಗುಣಮಟ್ಟದ ಮರಳನ್ನು ಪಡೆಯಲು ಜಿಲ್ಲಾಡಳಿತವು ‘ಸ್ಯಾಂಡ್ ಬಜಾರ್ ಆ್ಯಪ್’ ಅನ್ನು ಬಿಡುಗಡೆಗೊಳಿಸಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.  ಮರಳು ತೆಗೆಯಲು ಮತ್ತು ಸಾಗಾಟ ಮಾಡಲು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಅವಕಾಶವಿರುತ್ತದೆ ಈ ಅವಧಿ ಮೀರಿ ಮರಳು ಸಾಗಾಟ ಮಾಡಿದ್ದಲ್ಲಿ ಅಕ್ರಮ ಮರಳು ಸಾಗಾಟವೆಂದು ಪರಿಗಣಿಸಿ ಕಾನೂನು ಕ್ರಮ ಜರುಗಿಸಲಾಗುತ್ತದೆ. ಮರಳು ಸಾಗಾಟ ಮಾಡುವ ವಾಹನಗಳಿಗೆ ಕಡ್ಡಾಯವಾಗಿ ಜಿ.ಪಿ.ಎಸ್ ಅನ್ನು ಅಳವಡಿಸಿ, ವಾಹನದ ಮುಂಭಾಗದಲ್ಲಿ ಮತ್ತು ಹಿಂಬದಿಯಲ್ಲಿ ‘ಮರಳು ಸಾಗಾಣಿಕೆ ವಾಹನ’ ಎಂದು ಆರ್.ಟಿ.ಓ ಇಲಾಖೆಯಿಂದ ನೋಂದಾಯಿಸಿ ನಮೂದಿಸಬೇಕೆಂದರು.

    ಮರಳು ಸಾಗಾಣಿಕೆ ಮಾಡಲು ದಕ್ಕೆಯಿಂದ ಮುಖ್ಯ ರಸ್ತೆಯ ಮಾರ್ಗವನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಕಛೇರಿಗೆ ಸಲ್ಲಿಸಬೇಕು, ಸಲ್ಲಿಸಿದ ನಂತರ ಮಾರ್ಗವನ್ನು ಬದಲಾಯಿಸುವಂತಿಲ್ಲ ಆದರೆ ಮರಳು ಸಾಗಾಣಿಕೆಯಿಂದ ರಸ್ತೆ ಹಾಳಾದಲ್ಲಿ 3 ತಿಂಗಳಿಗೊಮ್ಮೆ ತಾತ್ಕಾಲಿಕ ಪರವಾನಿಗೆದಾರರೇ ದುರಸ್ಥಿಪಡಿಸಬೇಕೆಂದರು.    ಮರಳು ದಿಬ್ಬಗಳನ್ನು ತೆರವುಗೊಳಿಸಲು ಗರಿಷ್ಠ 3 ದೋಣಿಗಳನ್ನು ಬಳಸಲು ಅವಕಾಶವಿದೆ ಇವುಗಳ ನೋಂದಣಿಯನ್ನು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಲ್ಲಿ ಅಥವಾ ಮೀನುಗಾರಿಕಾ ಇಲಾಖೆಯಲ್ಲಿ 7 ದಿನಗಳ ಒಳಗಾಗಿ ನೋಂದಣಿ ಮಾಡಿಸಿ ಜಿ.ಪಿ.ಎಸ್ ಅಳವಡಿಸಬೇಕು ಎಂದರು.

    ಮರಳನ್ನು ಜಿಲ್ಲಾ ವ್ಯಾಪ್ತಿಯಲ್ಲಿ ಸ್ಥಳೀಯ ಬಳಕೆಗೆ ಮಾತ್ರ ಮಾರಾಟ ಮಾಡಬಹುದಾಗಿದ್ದು, ಇದನ್ನು ಹೆಚ್ಚಿನ ದರದಲ್ಲಿ ಮಾರಾಟ ಮಾಡುವಂತಿಲ್ಲ. ಮತ್ತು ಸರ್ಕಾರಿ ಕಾಮಗಾರಿಗಳಿಗೆ ಶೇಕಡಾ 20%ರಷ್ಟು ಮರಳನ್ನು ಸರ್ಕಾರ ದರದಲ್ಲಿ ನೀಡಬೇಕು, ಮರಳು ದಕ್ಕೆಯಲ್ಲಿ ಕಡ್ಡಾಯವಾಗಿ ಸಿಸಿಟಿವಿ ಅನ್ನು ಅಳವಡಿಸಿ ಸಂಪರ್ಕವನ್ನು ಜಿಲ್ಲಾಡಳಿತಕ್ಕೆ ನೀಡಬೇಕೆಂದು ಪರವಾನಿಗೆದಾರರಿಗೆ ಸೂಚಿಸಿದರು.

    ತಾತ್ಕಾಲಿಕ ಪರವಾನಿಗೆದಾರರು ಮರಳು ಶೇಖರಿಸಲು ಹಾಗೂ ಲೋಡಿಂಗ್ ಮಾಡಲು ಸ್ವಂತ ಅಥವಾ ಗುತ್ತಿಗೆ ಆಧಾರದಲ್ಲಿ ದಕ್ಕೆ ಹೊಂದಿರತಕ್ಕದ್ದು. ಮರಳನ್ನು ಸಂಗ್ರಹಿಸಲು ಸರ್ಕಾರಿ ಜಾಗ ಬಳಸಿದಲ್ಲಿ ಜಿಲ್ಲಾಡಳಿತ ಸೂಚಿಸುವ ಶುಲ್ಕವನ್ನು ಸಂಬಂಧಪಟ್ಟ ಇಲಾಖೆಗೆ ಪಾವತಿಸಬೇಕು. ಹಾಗೂ ಮರಳು  ದಕ್ಕೆ ಪ್ರದೇಶದಲ್ಲಿ ತಾತ್ಕಾಲಿಕ ಪರವಾನಿಗೆ ಸಂಖ್ಯೆ, ಪರವಾನಿಗೆದಾರರ ಹೆಸರು, ಅವಧಿ, ದಕ್ಕೆಯ ಸರ್ವೆ ನಂಬರ್, ದೋಣಿಯ ಜಿ.ಪಿ.ಎಸ್ ನೊಂದಣಿ ಸಂಖ್ಯೆಯನ್ನು ಒಳಗೊಂಡಂತೆ ನಾಮಫಲಕ ಅಳವಡಿಸಿ  ಜಿಲ್ಲಾಡಳಿತಕ್ಕೆ ಛಾಯಾ ಚಿತ್ರ ಸಲ್ಲಿಸಬೇಕೆಂದರು.

    ಪರವಾನಿಗೆದಾರರು ಪರವಾನಿಗೆಯನ್ನು ಇತರರಿಗೆ ಮಾರಾಟ ಮಾಡುವಂತಿಲ್ಲ, ಮಾರಾಟ ಅಥವಾ ವರ್ಗಾವಣೆ ಮಾಡಿದ್ದಲ್ಲಿ ತಾತ್ಕಾಲಿಕ ಪರವಾನಿಗೆಯನ್ನು ರದ್ದುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು. ಮರಳು ದಿಬ್ಬಗಳನ್ನು ತೆರವುಗೊಳಿಸಲು ಬಳಸುವ ದೋಣಿಗಳನ್ನು ಹೊರತುಪಡಿಸಿ ಇನ್ನಿತರ ಯಾವುದೇ ದೋಣಿಗಳು ನದಿಗೆ ಪ್ರವೇಶಿಸಿ ಅನಧಿಕೃತವಾಗಿ ಮರಳು ತೆಗೆಯುವುದು ಹಾಗೂ ದಕ್ಕೆ ಪ್ರದೇಶಗಳಲ್ಲಿ ಇರುವುದು ಕಂಡು ಬಂದಲ್ಲಿ ಲಿಖಿತವಾಗಿ ಜಿಲ್ಲಾಡಳಿತದ ಗಮನಕ್ಕೆ ತಂದು ಅನಧಿಕೃತವಾಗಿ ಮರಳು ತೆಗೆಯುವುದು ಮತ್ತು ಸಾಗಾಣಿಕೆ ಮಾಡುವುದನ್ನು ತಡೆಗಟ್ಟಲು ಸಹಕರಿಸಬೇಕೆಂದು ಪರವಾನಿಗೆದಾರರಿಗೆ ಸೂಚನೆ ನೀಡಿದರು.

    ಪರವಾನಿಗೆದಾರರು ಅನಧಿಕೃತವಾಗಿ ಮರಳು ತೆಗೆಯುವುದು ಮತ್ತು ಸಾಗಾಣಿಕೆ ಮಾಡಲು ಅವಕಾಶ ನೀಡಿದಲ್ಲಿ ಅಂಥವರ ತಾತ್ಕಾಲಿಕ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಹಾಗೂ ಸ್ಯಾಂಡ್ ಬುಕಿಂಗ್ ಮಾಡಿದ 48 ಗಂಟೆಗಳೊಳಗಾಗಿ ಮರಳನ್ನು ಗ್ರಾಹಕರಿಗೆ ತಲುಪಿಸಬೇಕು 48 ಗಂಟೆಗಳಲ್ಲಿ ಗ್ರಾಹಕರಿಗೆ ಮರಳು ತಲುಪದೇ ಇದ್ದರೆ  ಹಾಗೂ ಮೂರು ಬಾರಿ ಜಿ.ಪಿ.ಎಸ್ ನಿಯಮ ಉಲ್ಲಂಘನೆ ಮಾಡಿದ್ದಲ್ಲಿ ಒಂದನೇ ಬಾರಿಗೆ ರೂ.25,000 ದಂಡ, ಎರಡನೇ ಬಾರಿ ರೂ.50,000 ಹಾಗೂ ಮೂರನೇ ಬಾರಿ ನಿಯಮ ಉಲ್ಲಂಘನೆಯಾದ್ದಲ್ಲಿ  ತಾತ್ಕಾಲಿಕ ಪರವಾನಿಗೆಯನ್ನು ರದ್ದುಪಡಿಸಲಾಗುವುದು ಎಂದು ಎಚ್ಚರಿಸಿದರು.

    Share Information
    Advertisement
    Click to comment

    You must be logged in to post a comment Login

    Leave a Reply