ಬೆಳ್ತಂಗಡಿ, ಮಾರ್ಚ್ 10: ಯಾವುದೇ ಅನುಮತಿ ಪಡೆಯದೆ ಅಕ್ರಮವಾಗಿ ಡೀಸೆಲ್ ಸಂಗ್ರಹಿಸಲಾಗಿದ್ದ ಅಡ್ಡೆಯ ಮೇಲೆ ಪೊಲೀಸರು ದಾಳಿ ನಡೆಸಿ 4,175 ಲೀಟರ್ ಡೀಸೆಲ್ ವಶಪಡಿಸಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದಲ್ಲಿ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಉಪವಿಭಾಗದ ಡಿವೈಎಸ್ಪಿ ರೋಹಿಣಿ ಸಿ.ಕೆ ಅವರ ನೇತೃತ್ವದಲ್ಲಿ ಮಾ.9ರಂದು ಮಧ್ಯರಾತ್ರಿ ಸುಮಾರು 1 ಗಂಟೆಗೆ ಕಣಿಯೂರು ಗ್ರಾಮದ ಮುದೆಲ್ತಿಯಾರ್ ಪ್ರದೇಶದಲ್ಲಿರುವ ಜಗದೀಶ್ (35) ಎಂಬವರ ಮನೆಯ ಹಿಂಭಾಗದ ಶೆಡ್ ಮೇಲೆ ದಾಳಿ ನಡೆಸಲಾಯಿತು.

ಈ ವೇಳೆ 20 ಬ್ಯಾರಲ್ಗಳಲ್ಲಿ ತಲಾ 200 ಲೀಟರ್ಗಳಂತೆ 4,000 ಲೀಟರ್ ಹಾಗೂ 5 ಕ್ಯಾನ್ಗಳಲ್ಲಿ 175 ಲೀಟರ್ ಡೀಸೆಲ್ ಸೇರಿದಂತೆ ಒಟ್ಟು 4,175 ಲೀಟರ್ ಡೀಸೆಲ್ ಮತ್ತು 5 ಖಾಲಿ ಕ್ಯಾನ್ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಇಂಧನದ ಮೌಲ್ಯ ಸುಮಾರು 3.50 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಈ ಸಂಬಂಧ ಜಗದೀಶ್ ಹಾಗೂ ಹರೀಶ್ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಬಿಎನ್ಎಸ್ 287, ಎಸೆನ್ಷಿಯಲ್ ಕಮಾಡಿಟೀಸ್ ಆಕ್ಟ್ 3 ಮತ್ತು 7 ಹಾಗೂ ಪೆಟ್ರೋಲಿಯಂ ಕಾಯ್ದೆಯ 23ನೇ ಕಲಂ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.