ಬೆಂಗಳೂರು, ಏಪ್ರಿಲ್ 01:ವಿಮಾನದಲ್ಲಿ ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿ ಆತಂಕ ಸೃಷ್ಟಿಸಿದ್ದ ಪ್ರಯಾಣಿಕನ ವಿರುದ್ಧ ದಾಖಲಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪೊಲೀಸರ ಕ್ರಮದ ವಿರುದ್ಧವೇ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿರುವ ಹಿನ್ನೆಲೆ, ಆತನ ವಿರುದ್ಧ ಮರು ಎಫ್ಐಆರ್ ದಾಖಲಾಗಿದೆ.

ಮಹಾರಾಷ್ಟ್ರ ಮೂಲದ ಉತ್ಕರ್ಷ ಎಂಬಾತ ಜೈಪುರದಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ವೇಳೆ ವಿಮಾನದಲ್ಲಿ ಅಸಭ್ಯವಾಗಿ ವರ್ತಿಸಿ, ತುರ್ತು ನಿರ್ಗಮನ ಬಾಗಿಲು ತೆಗೆಯಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಘಟನೆಗೆ ಸಂಬಂಧಿಸಿದಂತೆ ಏರ್ಲೈನ್ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರಿಗೆ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಪೊಲೀಸರು ಉತ್ಕರ್ಷನನ್ನು ವಶಕ್ಕೆ ಪಡೆದು ಎನ್ಸಿಆರ್ ಪ್ರಕರಣ ದಾಖಲಿಸಿ ವಿಚಾರಣೆ ನಡೆಸಿದರು. ಬಳಿಕ ಆತನಿಗೆ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದರು. ಆದರೆ ಠಾಣೆಯಿಂದ ಹೊರಬಂದ ಬಳಿಕ ಉತ್ಕರ್ಷ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ತನ್ನನ್ನು ನಾಲ್ಕು ಗಂಟೆಗಳ ಕಾಲ ಠಾಣೆಯ ಸೆಲ್ನಲ್ಲಿ ಇರಿಸಿ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾನೆ. ಜೊತೆಗೆ, ಬೆಂಗಳೂರು ಪೊಲೀಸರ ವಿರುದ್ಧ ಮಹಾರಾಷ್ಟ್ರ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾನೆ.
ಈ ಪೋಸ್ಟ್ ಗಮನಿಸಿದ ವಿಮಾನ ನಿಲ್ದಾಣ ಪೊಲೀಸರು, ತಪ್ಪು ಮಾಹಿತಿ ಹಂಚಿಕೆ ಹಾಗೂ ಸಾರ್ವಜನಿಕರಲ್ಲಿ ಗೊಂದಲ ಉಂಟುಮಾಡಿದ ಆರೋಪದಡಿ ಉತ್ಕರ್ಷ ವಿರುದ್ಧ ಮರು ಎಫ್ಐಆರ್ ದಾಖಲಿಸಿದ್ದಾರೆ.