ಇಡುಕ್ಕಿ ಎಪ್ರಿಲ್ 29: ಆಸ್ತಿ ವಿವಾದ ಮತ್ತು ಕ್ಷುಲ್ಲಕ ಜಗಳದ ಹಿನ್ನೆಲೆಯಲ್ಲಿ ಸ್ವಂತ ತಾಯಿ ಮತ್ತು ಸಹೋದರನನ್ನು ಅತ್ಯಂತ ಕ್ರೂರವಾಗಿ ಹತ್ಯೆ ಮಾಡಿ, ಶವಗಳನ್ನು ಮನೆಯ ಸಮೀಪವೇ ಹೂತುಹಾಕಿದ್ದ ಆರೋಪಿ ಸಾಜಿ (43) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ಆತನ ಬಂಧನ ದಾಖಲಾಗಿದ್ದು, ಕೊಲೆಯ ಭೀಕರತೆ ತನಿಖೆಯ ವೇಳೆ ಬಯಲಾಗಿದೆ.

ವಿಚಾರಣೆಯ ವೇಳೆ ಆರೋಪಿ ಸಾಜಿ ಈ ಕೃತ್ಯಕ್ಕೆ ಮೂರು ಪ್ರಮುಖ ಕಾರಣಗಳನ್ನು ನೀಡಿದ್ದಾನೆ ಎಂದು ಪೊಲೀಸರು ಹೇಳಿದ್ದು, ಕುಟುಂಬ ವಾಸವಿದ್ದ ಒಂದು ಎಕರೆ ಜಾಗ ಮತ್ತು ಮನೆಯ ಹಂಚಿಕೆಯ ವಿಚಾರದಲ್ಲಿ ದೀರ್ಘಕಾಲದ ವಿವಾದವಿತ್ತು. ಅಲ್ಲದೆ ಪಿತೃತ್ವದ ಬಗ್ಗೆ ಪ್ರಶ್ನಿಸಿ ಸಹೋದರ ರೆಜಿ ಪದೇ ಪದೇ ಸಾಜಿಯನ್ನು ಅವಮಾನಿಸುತ್ತಿದ್ದ ಎನ್ನಲಾಗಿದೆ. ಸಾಜಿಯ ವಿವಾಹದ ಯೋಜನೆಗಳಿಗೆ ತಾಯಿ ಮತ್ತು ಸಹೋದರ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು ಎಂದು ವರದಿಯಾಗಿದೆ.
ಏಪ್ರಿಲ್ 4ರ ರಾತ್ರಿ ಸಾಜಿ ತನ್ನ ಸಹೋದರ ರೆಜಿಗೆ ಊಟ ಬಡಿಸುತ್ತಿದ್ದಾಗ ಜಗಳ ಆರಂಭವಾಗಿದೆ. ಮಾಂಸದ ಕರಿಯನ್ನು (Meat Curry) ಬಡಿಸುವಾಗ ನಡೆದ ವಾಗ್ವಾದದಲ್ಲಿ ರೆಜಿ ಊಟದ ತಟ್ಟೆಯನ್ನು ತಳ್ಳಿದ್ದರಿಂದ ಕರಿ ಸಾಜಿಯ ಮೈಮೇಲೆ ಚೆಲ್ಲಿತ್ತು. ಇದರಿಂದ ಕೆರಳಿದ ಸಾಜಿ, ರೆಜಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಕೊನೆಗೆ ಟವಲ್ನಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾನೆ. ರೆಜಿ ಕೆಳಗೆ ಬಿದ್ದ ನಂತರ ಆತನ ಎದೆ ಮತ್ತು ಮುಖದ ಮೇಲೆ ಕಾಲಿನಿಂದ ತುಳಿದು ವಿಕೃತಿ ಮೆರೆದಿದ್ದಾನೆ.
ಗದ್ದಲ ಕೇಳಿ ಓಡಾಡಲು ಕಷ್ಟಪಡುತ್ತಿದ್ದ ವೃದ್ಧ ತಾಯಿ ಮೇರಿಕುಟ್ಟಿ ಪಕ್ಕದ ಕೋಣೆಯಿಂದ ಧಾವಿಸಿ ಬಂದಿದ್ದರು. ಕೋಪೋದ್ರಿಕ್ತನಾಗಿದ್ದ ಸಾಜಿ ತಾಯಿಯ ಮುಖಕ್ಕೆ ಹೊಡೆದು ಕೆಳಗೆ ಬೀಳಿಸಿದ್ದಲ್ಲದೆ, ಆಕೆಯನ್ನು ಎತ್ತಿ ಗೋಡೆಗೆ ಬಡಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ಮಾಡಿದ ನಂತರ ಸಾಜಿ ಗಾಬರಿಯಾಗದೆ ರಕ್ತದ ಕಲೆಗಳನ್ನು ತೊಳೆದು ಕೋಣೆಯನ್ನು ಸ್ವಚ್ಛಗೊಳಿಸಿದ್ದ. ಶವಗಳನ್ನು ಹಸಿರು ಬಲೆಯಲ್ಲಿ ಸುತ್ತಿ ಪಕ್ಕದ ಶೆಡ್ನಲ್ಲಿ ಅಡಗಿಸಿಟ್ಟಿದ್ದ. ಎರಡು ದಿನಗಳ ಕಾಲ ಮನೆಯಲ್ಲೇ ತಂಗಿದ್ದ ಆತ, ನಂತರ ಗುಂಡಿ ತೋಡಿ ತಾಯಿ ಮತ್ತು ಸಹೋದರನ ಶವಗಳನ್ನು ಹೂತುಹಾಕಿದ್ದ. ಸಾಜಿಯ ತಂದೆ ಮ್ಯಾಥ್ಯೂ ಕೂಡ ಈ ಹಿಂದೆ ನಿಗೂಢವಾಗಿ ನಾಪತ್ತೆಯಾಗಿದ್ದರು. ಈಗಿನ ಜೋಡಿ ಕೊಲೆಯ ಹಿನ್ನೆಲೆಯಲ್ಲಿ ಮ್ಯಾಥ್ಯೂ ಅವರ ಕಣ್ಮರೆಯಲ್ಲೂ ಸಾಜಿಯ ಪಾತ್ರವಿರಬಹುದೇ ಎಂಬ ಸಂಶಯ ಪೊಲೀಸರಿಗೆ ಮೂಡಿದ್ದು, ಆ ನಿಟ್ಟಿನಲ್ಲಿಯೂ ತನಿಖೆ ಚುರುಕುಗೊಂಡಿದೆ.
ಆರೋಪಿಯನ್ನು ನೆಡುಂಕಂಡಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದ್ದು, ಹೆಚ್ಚಿನ ವಿಚಾರಣೆಗಾಗಿ ಪೊಲೀಸ್ ಕಸ್ಟಡಿಗೆ ಕೋರಲಾಗುವುದು.