Connect with us

LATEST NEWS

ಕೃಷಿ ಮಸೂದೆಯನ್ನು ಹಿಂಪಡೆಯದಿದ್ರೆ, ಖೇಲ್ ರತ್ನ ಪ್ರಶಸ್ತಿ ವಾಪಸ್ ಕೊಡುವೆ: ವಿಜೇಂದರ್ ಸಿಂಗ್

ನವದೆಹಲಿ, ಡಿಸೆಂಬರ್  06: ಕೃಷಿ ಮಸೂದೆಯನ್ನು ವಾಪಸ್ ಪಡೆಯದೆ ಇದ್ದರೆ, ತಮಗೆ ಬಂದಿರುವ ಖೇಲ್ ರತ್ನ ಪ್ರಶಸ್ತಿಯನ್ನು ವಾಪಸ್ ಕೊಡುತ್ತೇನೆ ಎಂದು ಬಾಕ್ಸರ್ ವಿಜೇಂದರ್ ಸಿಂಗ್ ಹೇಳಿದ್ದಾರೆ.

ಭಾರತದ ಬಾಕ್ಸರ್ ಮತ್ತು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ವಿಜೇಂದರ್ ಸಿಂಗ್ ಅವರು ಇಂದು ಸಿಂಘು (ದೆಹಲಿ-ಹರಿಯಾಣ) ಗಡಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಾಥ್ ನೀಡಿದರು. ಮಿಡಲ್ ವೇಟ್ ವಿಭಾಗದಲ್ಲಿ 2006 ಮತ್ತು 2014ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದ ಸಿಂಗ್ ಅವರು ಖೇಲ್ ರತ್ನ ಪ್ರಶಸ್ತಿಗೆ ಭಾಜನಾರಗಿದ್ದರು.

ಈ ವೇಳೆ ಪ್ರತಿಭಟನಾ ನಿರತ ರೈತರನ್ನು ಉದ್ದೇಶಿಸಿ ಮಾತನಾಡಿದ ವಿಜೇಂದರ್ ಸಿಂಗ್, ವಿವಾದಾತ್ಮಕ ಕೃಷಿ ಮಸೂದೆಯನ್ನು ಕೇಂದ್ರ ಸರ್ಕಾರ ಹಿಂತೆಗೆದುಕೊಳ್ಳದಿದ್ದರೆ ತಮಗೆ ಬಂದಿರುವ ರಾಷ್ಟ್ರದ ಅತ್ಯುನ್ನತ ಕ್ರೀಡಾ ಪ್ರಶಸ್ತಿ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಯನ್ನು ಹಿಂದಿರುಗಿಸುವುದಾಗಿ ಹೇಳಿದರು. ವಿಜೇಂದರ್ ಸಿಂಗ್ ಅವರಿಗೆ 2009ರಲ್ಲಿ ಖೇಲ್ ರತ್ನ ಪ್ರಶಸ್ತಿಯನ್ನು ನೀಡಲಾಗಿತ್ತು.

ನಾನು ಪಾಂಜಾಬ್‍ನಲ್ಲಿ ತರಬೇತಿ ಪಡೆದಿದ್ದೇನೆ ಮತ್ತು ಅಲ್ಲಿನ ರೈತರು ಬೆಳೆದ ಗೋದಿಯ ರೊಟ್ಟಿ ತಿಂದಿದ್ದೇನೆ. ಇಂದು ಅವರು ಇಲ್ಲಿ ಕಷ್ಟದಲ್ಲಿರುವಾಗ ನಾನು ಅವರ ಸಹೋದರನಾಗಿ ಬಂದಿದ್ದೇನೆ. ಹರಿಯಾಣದ ಇತರ ಕ್ರೀಡಾಪಟುಗಳು ಇಲ್ಲಿಗೆ ಬರಲು ಬಯಸಿದ್ದರು, ಆದರೆ ಅವರಿಗೆ ಸರ್ಕಾರಿ ಉದ್ಯೋಗ ಇರುವ ಕಾರಣ ಬರಲು ಆಗಲಿಲ್ಲ. ಆದರೆ ಅವರು ರೈತರೊಂದಿಗೆ ಇದ್ದಾರೆ ಎಂದು ತಿಳಿಸಿದರು.

ಇದಕ್ಕೂ ಮೊದಲು 30ಕ್ಕೂ ಹೆಚ್ಚು ಮಾಜಿ ಒಲಿಂಪಿಕ್ ಆಟಗಾರರು ಮತ್ತು ಪದಕ ವಿಜೇತರು ಸದ್ಯ ನಡೆಯುತ್ತಿರುವ ರೈತ ಹೋರಾಟಕ್ಕೆ ಬೆಂಬಲ ನೀಡಿಲು ನಿರ್ಧರಿಸಿದ್ದಾರೆ. ಇದರ ಜೊತೆಗೆ ಭಾರತದ ಮಾಜಿ ಬಾಸ್ಕೆಟ್ ಬಾಲ್ ಆಟಗಾರ ಮತ್ತು ಅರ್ಜುನ ಪ್ರಶಸ್ತಿ ವಿಜೇತ ಸಜ್ಜನ್ ಸಿಂಗ್ ಚೀಮಾ ಅವರು ಕೂಡ ರೈತರಿಗೆ ಬೆಂಬಲ ಘೋಷಿಸಿದ್ದಾರೆ. ಕ್ರೀಡಾಪಟುಗಳ ಜೊತೆಗೆ ಖ್ಯಾತ ಕಾದಂಬರಿಕಾರ ಡಾ.ಜಸ್ವಿಂದರ್ ಸಿಂಗ್ ಅವರು ತಮ್ಮ ಭಾರತೀಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸಹ ಹಿಂದಿರುಗಿಸುವುದಾಗಿ ಹೇಳಿದ್ದಾರೆ.

ಪಂಜಾಬಿನ ರೈತ ಮುಖಂಡರು ಮತ್ತು ಕೇಂದ್ರ ಸರ್ಕಾರದ ನಡುವೆ ನಡೆದ ಮಾತುಕತೆ ವಿಫಲವಾಗಿದ್ದು, ಈ ಕಾರಣದಿಂದ ಅಖಿಲ ಭಾರತ ಕಿಸಾನ್ ಸಂಘ ಸಮಿತಿಯು ಡಿಸೆಂಬರ್ 8 ರಂದು ಭಾರತ್ ಬಂದ್‍ಗೆ ಕರೆ ನೀಡಿದೆ.