ವಿಲ್ಲುಪುರಂ,ಬುಧವಾರ, 18 ಮಾರ್ಚ್: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರ ಹೊಸ ಯೋಜನೆಯನ್ನು ವ್ಯಂಗ್ಯ ಮಾಡುವ ಭರದಲ್ಲಿ ಎಐಎಡಿಎಂಕೆ (AIADMK) ಸಂಸದ ಸಿ.ವಿ. ಷಣ್ಮುಗಂ ಅವರು ನಟಿ ನಯನತಾರಾ ಅವರ ಹೆಸರನ್ನು ಎಳೆದು ತಂದು ಹೊಸ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಮಂಗಳವಾರ ವಿಲ್ಲುಪುರಂನಲ್ಲಿ ಡಿಎಂಕೆ ಸರ್ಕಾರದ ವಿರುದ್ಧ ಪಕ್ಷದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು ನಟಿಯ ಕುರಿತು ನೀಡಿದ ಹೇಳಿಕೆ ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಮಿಳುನಾಡು ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ “ನಿಮ್ಮ ಕನಸನ್ನು ನಮಗೆ ತಿಳಿಸಿ” (Tell us your dream) ಎಂಬ ಅಭಿಯಾನವನ್ನು ಟೀಕಿಸಿದ ಷಣ್ಮುಗಂ, “ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ನಮಗೆ ಕನಸು ಕಾಣಲು ಹೇಳಿದ್ದರು. ಈಗ ಮುಖ್ಯಮಂತ್ರಿಗಳು ನಿಮ್ಮ ಕನಸುಗಳನ್ನು ಹಂಚಿಕೊಳ್ಳಿ, ನಾವು ಈಡೇರಿಸುತ್ತೇವೆ ಎನ್ನುತ್ತಿದ್ದಾರೆ. ಒಂದು ವೇಳೆ ನಾನು ನನಗೆ ನಯನತಾರಾ ಬೇಕು ಎಂದು ಕನಸು ಕಂಡರೆ, ಸ್ಟಾಲಿನ್ ಅವರು ಆ ಕನಸನ್ನು ನನಸು ಮಾಡುತ್ತಾರೆಯೇ?” ಎಂದು ಪ್ರಶ್ನಿಸಿದರು.
ಸಂಸದರ ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಮಹಿಳೆಯೊಬ್ಬರ ಬಗ್ಗೆ ಇಂತಹ ಹಗುರವಾದ ಮಾತುಗಳನ್ನಾಡುವುದು ಸರಿಯಲ್ಲ ಎಂದು ಸಾರ್ವಜನಿಕರು ಆಕ್ಷೇಪಿಸಿದ್ದಾರೆ. ದಕ್ಷಿಣ ಭಾರತೀಯ ಚಲನಚಿತ್ರ ಕಲಾವಿದರ ಸಂಘ (SIAA) ಕೂಡ ಈ ಹೇಳಿಕೆಯನ್ನು ಖಂಡಿಸಿದ್ದು, ನಟಿ ನಯನತಾರಾ ಅವರಿಗೆ ಸಂಸದರು ಬಹಿರಂಗವಾಗಿ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದೆ.
ಆಡಳಿತಾರೂಢ ಡಿಎಂಕೆ ನಾಯಕರು ಈ ಬಗ್ಗೆ ಪ್ರತಿಕ್ರಿಯಿಸಿ, “ವಿರೋಧ ಪಕ್ಷದ ನಾಯಕರಿಗೆ ಸರ್ಕಾರದ ಯೋಜನೆಗಳನ್ನು ಟೀಕಿಸಲು ಯಾವುದೇ ಗಂಭೀರ ವಿಷಯಗಳಿಲ್ಲದ ಕಾರಣ, ಇಂತಹ ಕೆಳಮಟ್ಟದ ಹೇಳಿಕೆಗಳನ್ನು ನೀಡುತ್ತಿದ್ದಾರೆ” ಎಂದು ಕಿಡಿಕಾರಿದ್ದಾರೆ. ಸದ್ಯ ಈ ವಿಡಿಯೋ ಇಂಟರ್ನೆಟ್ನಲ್ಲಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.