ಬೆಂಗಳೂರು: “ಯಾವುದೇ ಕೆಲಸ ನಿಮ್ಮ ಜೀವನಕ್ಕಿಂತ ದೊಡ್ಡದಲ್ಲ” ಎಂಬ ಕಟು ಸತ್ಯವನ್ನು ಬೆಂಗಳೂರಿನ ನಿಧಿ ಎಂಬುವವರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ವಿಡಿಯೋ ಈಗ ಐಟಿ ನಗರಿಯ ಕಾರ್ಪೊರೇಟ್ ವಲಯದಲ್ಲಿ ಭಾರಿ ಚರ್ಚೆ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ತಮ್ಮ ವೃತ್ತಿಜೀವನವನ್ನೇ ಪ್ರಪಂಚ ಎಂದು ನಂಬಿ, ಹಗಲಿರುಳು ದುಡಿಯುತ್ತಿದ್ದ ನಿಧಿ ಅವರನ್ನು ಕಂಪನಿಯು ದಿಢೀರ್ ಆಗಿ ಕೆಲಸದಿಂದ ವಜಾ ಮಾಡಿದೆ. ಈ ಆಘಾತದ ನಂತರ ಅವರು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿರುವ ಮಾತುಗಳು ಪ್ರತಿಯೊಬ್ಬ ಉದ್ಯೋಗಿಯೂ ಯೋಚಿಸುವಂತೆ ಮಾಡಿದೆ. “ನನ್ನ ಕೆಲಸದಿಂದ ನಾನು ವಜಾ ಆಗಿದ್ದು ನನ್ನ ಪಾಲಿಗೆ ಒಂದು ಎಚ್ಚರಿಕೆಯ ಕರೆ (Wake-up call) ಆಗಿತ್ತು” ಎಂದು ಅವರು ಭಾವುಕರಾಗಿ ಹೇಳಿದ್ದಾರೆ.
ಕೆಲಸದ ಭರದಲ್ಲಿ ತಾವು ಕಳೆದುಕೊಂಡಿದ್ದನ್ನು ವಿವರಿಸಿರುವ ನಿಧಿ, “ನಾನು ನನ್ನ ಕೆಲಸವನ್ನು ಸರ್ವಸ್ವ ಎಂದು ಭಾವಿಸಿದ್ದೆ. ಆ ಚಕ್ರವ್ಯೂಹದಲ್ಲಿ ಸಿಲುಕಿ ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು ಸ್ನೇಹಿತರೊಂದಿಗೆ ಬೆರೆಯುವುದನ್ನು ಸಂಪೂರ್ಣವಾಗಿ ಮರೆತಿದ್ದೆ. ನನ್ನ ಇಡೀ ಪ್ರಪಂಚ ಕೇವಲ ಮೀಟಿಂಗ್ಗಳು, ಡೆಡ್ಲೈನ್ಗಳು ಮತ್ತು ಮಾನಸಿಕ ಒತ್ತಡದ ಸುತ್ತಲೇ ಸುತ್ತುತ್ತಿತ್ತು” ಎಂದು ಕೆಲಸದ ಒತ್ತಡದ ದಿನಗಳನ್ನು ನೆನಪಿಸಿಕೊಂಡಿದ್ದಾರೆ.
ನಿಧಿ ಅವರ ಈ ವಿಡಿಯೋಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಅನೇಕ ಐಟಿ ಉದ್ಯೋಗಿಗಳು ತಮಗೂ ಇಂತಹದ್ದೇ ಅನುಭವವಾಗಿದೆ ಎಂದು ಕಮೆಂಟ್ ಮಾಡಿದ್ದಾರೆ. “ಕಂಪನಿಗಳಿಗೆ ನಾವು ಕೇವಲ ಒಂದು ಸಂಖ್ಯೆ (Resource) ಅಷ್ಟೇ, ಆದರೆ ನಮ್ಮ ಕುಟುಂಬಕ್ಕೆ ನಾವು ಇಡೀ ಪ್ರಪಂಚ” ಎಂದು ನೆಟ್ಟಿಗರು ಕಂಪನಿಗಳ ಸಂಸ್ಕೃತಿಯನ್ನು ಟೀಕಿಸಿದ್ದಾರೆ. ಅತಿಯಾದ ಕೆಲಸವನ್ನು ವೈಭವೀಕರಿಸುವ ‘ಹಸಲ್ ಕಲ್ಚರ್’ (Hustle Culture) ಬಗ್ಗೆಯೂ ತೀವ್ರ ವಿರೋಧ ವ್ಯಕ್ತವಾಗಿದೆ.
ಬೆಂಗಳೂರಿನಂತಹ ನಗರಗಳಲ್ಲಿ ವೃತ್ತಿಪರರು ಎದುರಿಸುತ್ತಿರುವ ‘ಬರ್ನ್ಔಟ್’ ಸಮಸ್ಯೆಯನ್ನು ಈ ಘಟನೆ ಎತ್ತಿ ತೋರಿಸಿದೆ. ಕೆಲಸ ಕಳೆದುಕೊಂಡಿದ್ದು ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು, ಇದರಿಂದಲಾದರೂ ನಿಮಗೆ ನಿಮ್ಮ ವೈಯಕ್ತಿಕ ಆರೋಗ್ಯ ಮತ್ತು ನೆಮ್ಮದಿಯ ಮಹತ್ವ ತಿಳಿಯಿತು ಎಂದು ಹಲವರು ಸಮಾಧಾನಪಡಿಸಿದ್ದಾರೆ.