Connect with us

    KARNATAKA

    ಸಾಯಿಸಲೆಂದೇ ಎಳೆದೊಯ್ದೆ… ಪೊಲೀಸರ ಮುಂದೆ ಸತ್ಯ ಬಾಯ್ಬಿಟ್ಟ ಸಾಹಿಲ್​

    ಬೆಂಗಳೂರು, ಜನವರಿ 20: ವೃದ್ಧನನ್ನು ಬೈಕ್​ನಲ್ಲಿ ಅಮಾನವೀಯವಾಗಿ ಎಳೆದುಕೊಂಡು ಹೋದ ಪ್ರಕರಣದಲ್ಲಿ ಬಂಧಿತನಾಗಿರುವ 21 ವರ್ಷದ ಆರೋಪಿ ಸಾಹಿಲ್ ಯಾಸಿನ್, ಪೊಲೀಸರ ವಿಚಾರಣೆಯಲ್ಲಿ ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದು, ಸಾಯಿಸುವ ಉದ್ದೇಶದಿಂದಲೆ ವೃದ್ಧನನ್ನು ಎಳೆದುಕೊಂಡು ಹೋದೆ ಎನ್ನುವ ಮೂಲಕ ತನ್ನಲ್ಲಿರುವ ಕ್ರೂರ ಮುಖವನ್ನು ಮತ್ತೊಮ್ಮೆ ಬಯಲು ಮಾಡಿದ್ದಾನೆ.

    ನಾನು ಬೆಂಗಳೂರಿನಲ್ಲಿ ಕಳೆದ 8 ವರ್ಷಗಳಿಂದ ವಾಸವಾಗಿದ್ದೇನೆ. ನನ್ನ ತಾಯಿ ಶಬನಮ್ ಮತ್ತು ತಮ್ಮನ ಜೊತೆಯಲ್ಲಿ ವಾಸವಿದ್ದೇನೆ. ತಂದೆ ಮೂಲತಃ ಗುಜರಾತಿನವರು. ನಾನು ವಾಸವಿ ಇಂಟರ್ ನ್ಯಾಷನಲ್ ಪಿಯು ಕಾಲೇಜಿನಲ್ಲಿ ಪಿಯುಸಿ ಓದಿದೆ. ಬಳಿಕ ಓದುವುದನ್ನು ಬಿಟ್ಟಿದ್ದೆ. ಇದಾದ ನಂತರ ಕಳೆದ 7 ತಿಂಗಳಿಂದ ಬೆಂಗಳೂರಿನ ಕೆಂಗೇರಿಯಲ್ಲಿರುವ ಯುನೈಟೆಡ್ ಅಸೋಸಿಯೇಟ್ಸ್ ಹೆಸರಿನ ಡೆಟಾಯಿಲ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೆ. ಹಣ ಸಂಗ್ರಹ ಮಾಡುವ ಜವಬ್ದಾರಿಯನ್ನು ತೆಗೆದುಕೊಂಡಿದ್ದೆ ಎಂದು ಸಾಹಿಲ್​ ವಿಚಾರಣೆಯಲ್ಲಿ ಹೇಳಿದ್ದಾನೆ.

    ಜ.17 ರಂದು ಬೆಳಗ್ಗೆ 9 ಗಂಟೆಗೆ ಎಂದಿನಂತೆ ನಮ್ಮ ಮಾಲೀಕ ನನಗೆ ಯಲಹಂಕದ ಕಡೆಗೆ ಹೋಗಿ ಆರ್ಡರ್ ಹಾಗೂ ಕಲೆಕ್ಷನ್ ಮಾಡಿಕೊಂಡು ಬರುವಂತೆ ಹೇಳಿದರು. ಅದರಂತೆ ನಾನು ನನ್ನ ಸುಜುಕಿ ಆಕ್ಸಿಸ್ ಸ್ಕೂಟರ್​ನಲ್ಲಿ’ ಯಲಹಂಕದ ಕಡೆಗೆ ಹೋಗಿ ಅರ್ಡರ್ ಮತ್ತು ಹಣವನ್ನು ಕಲೆಕ್ಷನ್ ಮಾಡಿಕೊಂಡು ಮಧ್ಯಾಹ್ನ ಸುಮಾರು 2 ಗಂಟೆಯ ಸಮಯದಲ್ಲಿ ನಾಯಂಡನಹಳ್ಳಿಯ ನಮ್ಮ ಮನೆಗೆ ಹೋಗುತ್ತಿದ್ದೆ. ಈ ವೇಳೆ ವೆಸ್ಟ್ ಆಫ್​ ಕಾರ್ಡ್ ರಸ್ತೆಯ ಮುಖಾಂತರ ಟೋಲ್‌ಗೇಟ್ ಬಳಿಯ ಅಂಡರ್‌ಪಾಸ್ ಬಳಿಯ ರಸ್ತೆಯ ಬದಿಯಲ್ಲಿ ಒಂದು ಬೊಲೆರೋ ವಾಹನ ನಿಂತಿತ್ತು.

    ನಾನು ಮೊಬೈಲ್‌ನಲ್ಲಿ ಮಾತನಾಡಿಕೊಂಡು ಸ್ಪೀಡಾಗಿ ಬರುತ್ತಿದ್ದರಿಂದ ಕಂಟ್ರೋಲ್ ಮಾಡಲು ಸಾಧ್ಯವಾಗದೆ ಬೊಲೆರೋ ವಾಹನಕ್ಕೆ ಗುದ್ದಿ ಕೆಳಗಡೆ ಬಿದ್ದೆನು. ಈ ವೇಳೆ ಬೊಲೇರೋ ವಾಹನದ ಚಾಲಕರು ಅಲ್ಲಿಯೇ ಇದ್ದರು. ಅವರು ನನ್ನ ಬಳಿಗೆ ಬರುತ್ತಿದ್ದರು. ನನ್ನನ್ನು ಹಿಡಿಕೊಳ್ಳುತ್ತಾರೆ ಎಂಬ ಭಯದಲ್ಲಿ, ಅವರಿಂದ ತಪ್ಪಿಸಿಕೊಂಡು ಹೋಗಬೇಕೆಂದು ತೀರ್ಮಾನಿಸಿ, ಅಲ್ಲಿಂದ ಹೊರಡಲು ಯತ್ನಿಸಿದೆ. ಬೊಲೇರೋ ಡ್ರೈವರ್ ನನ್ನ ಸ್ಕೂಟರ್​ನ ಹಿಂಬದಿಯ ಸ್ಟ್ಯಾಂಡ್ ಅನ್ನು ಹಿಡಿದುಕೊಂಡರು.

    ನಂತರ ನಾನು ನನ್ನ ಗಾಡಿಯನ್ನು ನಿಲ್ಲಿಸದೇ ಅಲ್ಲಿಂದ ಇನ್ನೂ ಸ್ಪೀಡಾಗಿ ಗಾಡಿ ಓಡಿಸಿಕೊಂಡು ಹೋದೆ. ಈ ವೇಳೆ ಬೊಲೇರೋ ಡ್ರೈವರ್ ಗಾಡಿ ನಿಲ್ಲಿಸುವಂತೆ ಕೇಳಿಕೊಂಡರು. ಆದರೆ, ನಾನು ಗಾಡಿಯನ್ನು ನಿಲ್ಲಿಸದೇ ಹಾಗೇ ಎಳೆದುಕೊಂಡು ಹೋಗಿ ಅವನನ್ನು ಸಾಯಿಸಬೇಕೆಂದು ತೀರ್ಮಾನಿಸಿದೆ. ಸುಮಾರು 500 ರಿಂದ 600 ಮೀಟರ್‌ವರೆಗೆ ಗಾಡಿಯಲ್ಲೇ ಎಳೆದುಕೊಂಡು ಹೋದೆನು. ಅಷ್ಟರಲ್ಲಿ ರಸ್ತೆಯಲ್ಲಿ ಬರುತ್ತಿದ್ದ ಸಾರ್ವಜನಿಕರು ಅಡ್ಡ ಬಂದು ನನ್ನನ್ನು ತಡೆದು ನಿಲ್ಲಿಸಿ, ಗಾಡಿ ಸಮೇತ ಹಿಡಿದುಕೊಂಡರು. ಅಷ್ಟರಲ್ಲಿ ಅಲ್ಲಿಗೆ ಹೊಯ್ಸಳ ಪೊಲೀಸರು ಬಂದು ನನ್ನನ್ನು ನನ್ನ ಸ್ಕೂಟರ್ ಸಮೇತ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದರು. ನಾನು ಈ ರೀತಿ ಮಾಡಿರುವುದು ತಪ್ಪು ಎಂದು ಸಾಹಿಲ್​ ಒಪ್ಪುಕೊಂಡಿದ್ದಾನೆ.

    Share Information
    Advertisement
    Click to comment

    You must be logged in to post a comment Login

    Leave a Reply