ಹೈದರಾಬಾದ್,ಮಾರ್ಚ್ 26: ಪ್ರೇಮದ ಅಮಲಿನಲ್ಲಿ ವಿವೇಚನೆ ಕಳೆದುಕೊಂಡ ಅಪ್ರಾಪ್ತ ಮಗಳು, ತನ್ನ ಪ್ರಿಯಕರನೊಂದಿಗೆ ಸೇರಿ ಹೆತ್ತ ತಾಯಿಯನ್ನೇ ಉಸಿರುಗಟ್ಟಿಸಿ ಕೊಂದು, ಶವವನ್ನು ಮನೆಯ ಬೆಡ್ರೂಮ್ನಲ್ಲೇ ಹೂತು ಹಾಕಿದ್ದ ಅತಿ ಭಯಾನಕ ಘಟನೆ ಹೈದರಾಬಾದ್ನಲ್ಲಿ ಬೆಳಕಿಗೆ ಬಂದಿದೆ. ಒಂದು ವರ್ಷದವರೆಗೆ ತಾಯಿಯ ಸಮಾಧಿಯ ಮೇಲೆಯೇ ಸಂಸಾರ ಹೂಡಿ, ಮಗುವನ್ನೂ ಪಡೆದಿದ್ದ ಮಗಳ ಕ್ರೌರ್ಯ ಕಂಡು ನಾಗರಿಕ ಸಮಾಜವೇ ದಂಗಾಗಿದೆ.

ಮೃತ ಮಹಿಳೆಯನ್ನು ಅಂಜು ದಾಸರಿ ರಾಮಯ್ಯ (40) ಎಂದು ಗುರುತಿಸಲಾಗಿದೆ. ಈಕೆ ಐದು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ತನ್ನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಹೈದರಾಬಾದ್ನ ಜೀಡಿಮೆಟ್ಲ/ಜವಾಹರ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಅಂಜು ಅವರ 16 ವರ್ಷದ ಹಿರಿಯ ಮಗಳು, ಟ್ರಕ್ ಚಾಲಕನಾಗಿದ್ದ ಮೋಂಟಿ ಅಲಿಯಾಸ್ ಶಿವ (22) ಎಂಬಾತನೊಂದಿಗೆ ಪ್ರೇಮಪಾಶಕ್ಕೆ ಬಿದ್ದಿದ್ದಳು. ಮಗಳು ಅಪ್ರಾಪ್ತೆಯಾಗಿದ್ದರಿಂದ ಮತ್ತು ಯುವಕನ ನಡವಳಿಕೆ ಸರಿಯಿಲ್ಲದ ಕಾರಣ ಅಂಜು ಈ ಸಂಬಂಧಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದು ತಾಯಿ-ಮಗಳ ನಡುವೆ ನಿರಂತರ ಸಂಘರ್ಷಕ್ಕೆ ಕಾರಣವಾಗಿತ್ತು.
2025ರ ಮೇ ತಿಂಗಳಿನಲ್ಲಿ, ಪ್ರೀತಿಗೆ ಅಡ್ಡಿಯಾಗುತ್ತಿದ್ದ ತಾಯಿಯನ್ನು ಮುಗಿಸಲು ಸಂಚು ರೂಪಿಸಿದ ಈ ಜೋಡಿ, ಮನೆಯಲ್ಲಿಯೇ ಅಂಜು ಅವರನ್ನು ಉಸಿರುಗಟ್ಟಿಸಿ ಹತ್ಯೆ ಮಾಡಿದ್ದರು. ನಂತರ ಯಾರೂ ಇಲ್ಲದ ಸಮಯದಲ್ಲಿ ಬೆಡ್ರೂಮ್ನ ನೆಲವನ್ನು ಅಗೆದು ಶವವನ್ನು ಅಲ್ಲಿಯೇ ಹೂತು ಹಾಕಿದ್ದರು. ಈ ಭೀಕರ ಕೃತ್ಯಕ್ಕೆ ಅಂಜು ಅವರ ಕಿರಿಯ ಮಗಳು ಸಾಕ್ಷಿಯಾಗಿದ್ದರೂ, ಆಕೆಯನ್ನು ಬೆದರಿಸಿ ಬಾಯಿ ಮುಚ್ಚಿಸಲಾಗಿತ್ತು ಎಂದು ಕೆಲವು ವರದಿಗಳು ತಿಳಿಸಿವೆ.
ಹತ್ಯೆಯ ನಂತರ ಮಗಳೇ ಪೊಲೀಸ್ ಠಾಣೆಗೆ ತೆರಳಿ ತನ್ನ ತಾಯಿ ನಾಪತ್ತೆಯಾಗಿದ್ದಾರೆ ಎಂದು ದೂರು ನೀಡಿದ್ದಳು. ಅಷ್ಟೇ ಅಲ್ಲದೆ, ಪ್ರಿಯಕರ ಮೋಂಟಿಯನ್ನು ಅದೇ ಮನೆಗೆ ಕರೆಸಿಕೊಂಡು ಆತನೊಂದಿಗೆ ಮದುವೆಯಾಗಿ ಸಂಸಾರ ಆರಂಭಿಸಿದ್ದಳು. ಕಳೆದ ಒಂದು ವರ್ಷದಲ್ಲಿ ಇವರಿಗೆ ಒಂದು ಗಂಡು ಮಗುವೂ ಜನಿಸಿದೆ. ತಾಯಿಯನ್ನು ಹೂತಿದ್ದ ಅದೇ ಬೆಡ್ರೂಮ್ನಲ್ಲಿ ಈ ದಂಪತಿ ದಿನನಿತ್ಯದ ಜೀವನ ಸಾಗಿಸುತ್ತಿದ್ದರು.
ವರ್ಷ ಕಳೆದರೂ ತಾಯಿಯ ಬಗ್ಗೆ ಯಾವುದೇ ಆತಂಕ ಅಥವಾ ಪಶ್ಚಾತಾಪವಿಲ್ಲದೆ ಮಗಳು ಆರಾಮವಾಗಿ ಜೀವನ ಸಾಗಿಸುತ್ತಿದ್ದದ್ದು ಪೊಲೀಸರಲ್ಲಿ ಸಂಶಯ ಮೂಡಿಸಿತ್ತು. ಬಾಳನಗರ ಡಿಸಿಪಿ ಮಾರ್ಗದರ್ಶನದಲ್ಲಿ ಜೀಡಿಮೆಟ್ಲ ಪೊಲೀಸರು ಈಕೆಯನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ, ಆಕೆ ಸತ್ಯ ಒಪ್ಪಿಕೊಂಡಿದ್ದಾಳೆ. ಪೊಲೀಸರು ಮನೆಯ ನೆಲವನ್ನು ಅಗೆದಾಗ ಅಂಜು ಅವರ ಅಸ್ಥಿಪಂಜರ ಪತ್ತೆಯಾಗಿದೆ.ಪೊಲೀಸರು ಆರೋಪಿ ಮೋಂಟಿಯನ್ನು ಬಂಧಿಸಿದ್ದು, ಅಪ್ರಾಪ್ತ ಮಗಳನ್ನು ರಿಮಾಂಡ್ ಹೋಮ್ಗೆ ಕಳುಹಿಸಲಾಗಿದೆ. ಮೃತದೇಹದ ಅವಶೇಷಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಲಾಗಿದ್ದು, ಹೆಚ್ಚಿನ ತನಿಖೆ ಮುಂದುವರಿದಿದೆ.