Connect with us

LATEST NEWS

ಬಸ್ ನಲ್ಲಿ ಕಿರುಕುಳ ನೀಡಿದ್ದ ಕಾಮುಕನಿಗೆ ಕಪಾಳಮೋಕ್ಷ…ಮಾನವ ಹಕ್ಕು ಉಲ್ಲಂಘನೆಯಾಗಿದೆ ಎಂದು ದೂರು

ಮಂಗಳೂರು ಫೆಬ್ರವರಿ 3: ಮಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ಸಿನಲ್ಲಿ ಯುವತಿಯೊಬ್ಬಳಿಗೆ ಲೈಂಗಿಕ ಕಿರುಕುಳು ನೀಡಿದ್ದ ಆರೋಪಿಗೆ ಪೊಲೀಸ್ ಕಮಿಷನರ್ ಎದುರೆ ಕಪಾಳಮೋಕ್ಷ ಮಾಡಿದ್ದನ್ನು ಪ್ರಶ್ನಿಸಿ ಮಾನವಹಕ್ಕುಗಳ ಹೋರಾಟಗಾರರು ಕೋರ್ಟ್ ಮೆಟ್ಟಿಲೇರಿದ್ದಾರೆ.


ಖಾಸಗಿ ಬಸ್ ನಲ್ಲಿ ಲೈಂಗಿಕ ಕಿರುಕುಳ ನೀಡಿ ಯುವತಿಗೆ ಪೋಟೋ ಪೋಸ್ ಕೊಟ್ಟಿದ್ದ ಆರೋಪಿಯನ್ನು ಬಂಧಿಸಿ ಮಾಧ್ಯಮದ ಮುಂದೆ ಹಾಜರುಪಡಿಸಿ ಸುದ್ದಿಗಾರರಿಗೆ ಮಾಹಿತಿ ನೀಡುತ್ತಿದ್ದ ವೇಳೆ ಪೊಲೀಸರು ಮತ್ತು ಮಾಧ್ಯಮಗಳ ಕಣ್ಣೆದುರಿನಲ್ಲೇ ಸಂತ್ರಸ್ತ ಯುವತಿ ಆರೋಪಿಗೆ ಕಪಾಳ ಮೋಕ್ಷ ಮಾಡಿದ್ದರು. ಆದರೆ ಈ ಘಟನೆ ಇದೀಗ ಹೊಸ ತಿರುವು ಪಡೆದಿದೆ. ಯುವತಿ ಆರೋಪಿ ಕೆನ್ನೆಗೆ ಹೊಡೆಯಲು ಅವಕಾಶ ಮಾಡಿಕೊಟ್ಟಿರುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸುರತ್ಕಲ್ ಚೊಕ್ಕಬೆಟ್ಟುವಿನ ಜೋಹನ್ ಸಿಕ್ವೇರಾ ಎಂಬವರು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದಾರೆ.


ಪೊಲೀಸ್ ಕಸ್ಟಡಿಯಲ್ಲಿರುವ ವ್ಯಕ್ತಿಯನ್ನು ಪರೇಡ್ ಮಾಡಿ ಆತನಿಗೆ ಹಲ್ಲೆ ನಡೆಸಿರುವುದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ. ಇದಕ್ಕೆ ಅವಕಾಶವನ್ನು ಪೊಲೀಸರು ಮಾಡಿಕೊಟ್ಟಿರುವುದಲ್ಲದೇ ವಿಡಿಯೋವನ್ನು ಕೂಡಾ ಮಾಡಿರುವುದು ಗಮನಕ್ಕೆ ಬಂದಿದೆ. ಪೊಲೀಸ್ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ದೂರು ನೀಡಿದ್ದಾರೆ.