ಬೆಂಗಳೂರು ಎಪ್ರಿಲ್ 09: ಹುಳಿಮಾವು ಗ್ರಾಮದ ಶ್ರೀ ಕೋದಂಡ ರಾಮಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವದ ಸಂಭ್ರಮದ ನಡುವೆಯೇ ಟ್ರ್ಯಾಕ್ಟರ್ ಹರಿದು ಯುವಕನೊಬ್ಬ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಬನಶಂಕರಿ ನಿವಾಸಿ ಅಕ್ಷತ್ (27) ಮೃತ ದುರ್ದೈವಿ.

ನಿನ್ನೆ ರಾತ್ರಿ ರಥೋತ್ಸವದ ಅಂಗವಾಗಿ ಪಲ್ಲಕ್ಕಿ ಉತ್ಸವ ಆಯೋಜಿಸಲಾಗಿತ್ತು. ಪಲ್ಲಕ್ಕಿ ಹೊತ್ತಿದ್ದ ಟ್ರ್ಯಾಕ್ಟರ್ ಸಂಚರಿಸುತ್ತಿದ್ದ ವೇಳೆ ಪಕ್ಕದಲ್ಲೇ ನಿಂತಿದ್ದ ಅಕ್ಷತ್ ಅವರ ಮೇಲೆ ಚಾಲಕನ ಅಜಾಗರೂಕತೆಯಿಂದ ಟ್ರ್ಯಾಕ್ಟರ್ ಹರಿದಿದೆ. ತೀವ್ರವಾಗಿ ಗಾಯಗೊಂಡಿದ್ದ ಅಕ್ಷತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗಮಧ್ಯೆಯೇ ಕೊನೆಯುಸಿರೆಳೆದಿದ್ದಾರೆ.
ಮೃತ ಅಕ್ಷತ್ ಅವರಿಗೆ ಶೀಘ್ರವೇ ಮದುವೆ ನಿಶ್ಚಯವಾಗಿತ್ತು. ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಬಂಧಿಕರು ಮತ್ತು ಸ್ನೇಹಿತರಿಗೆ ಹಂಚಲು ಅವರು ಹುಳಿಮಾವು ಗ್ರಾಮಕ್ಕೆ ಬಂದಿದ್ದರು. ಪತ್ರಿಕೆ ನೀಡಿ ಜಾತ್ರೆ ನೋಡಿಕೊಂಡು ಹೋಗೋಣ ಎಂದು ಅಲ್ಲಿಯೇ ಉಳಿದುಕೊಂಡಿದ್ದ ಅಕ್ಷತ್, ಮಸಣದ ಹಾದಿ ಹಿಡಿದಿರುವುದು ಕುಟುಂಬಸ್ಥರಲ್ಲಿ ಶೋಕ ಸಾಗರ ಮೂಡಿಸಿದೆ. ಘಟನೆ ಬಳಿಕ ಟ್ರ್ಯಾಕ್ಟರ್ ಚಾಲಕ ಪರಾರಿಯಾಗಿದ್ದು, ಬೆಂಗಳೂರು ದಕ್ಷಿಣ ಸಂಚಾರ ಡಿಸಿಪಿ ಗೋಪಾಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.