ಮುಂಬೈ ಮೇ 08: ಭೆಂಡಿ ಬಜಾರ್ನ ದೋಕಾಡಿಯಾ ಕುಟುಂಬದ ನಾಲ್ವರು ಸದಸ್ಯರ ಸಾವಿನ ಪ್ರಕರಣಕ್ಕೆ ಕೊನೆಗೂ ವಿಧಿವಿಜ್ಞಾನ ಪರೀಕ್ಷೆಯಿಂದ ಉತ್ತರ ಸಿಕ್ಕಿದೆ. ಅವರು ಸೇವಿಸಿದ್ದ ಕಲ್ಲಂಗಡಿ ಹಣ್ಣಿನಲ್ಲಿ ಇಲಿ ಪಾಶಾಣ ಬೆರತಿರುವುದು 54 ಸುತ್ತುಗಳ ಸುದೀರ್ಘ ವೈಜ್ಞಾನಿಕ ಪರೀಕ್ಷೆಯ ನಂತರ ಸಾಬೀತಾಗಿದೆ.

ಶನಿವಾರ ರಾತ್ರಿ ಐದು ಸಂಬಂಧಿಕರೊಂದಿಗೆ ಕುಟುಂಬ ಕೋಳಿ ಪುಲಾವ್ ಊಟ ಮಾಡಿದ್ಗರು, ಬಳಿಕ ಏಪ್ರಿಲ್ 26ರ ಭಾನುವಾರ ಬೆಳಗಿನ ಜಾವ ಅಬ್ದುಲ್ಲಾ ದೋಕಾಡಿಯಾ (44), ಪತ್ನಿ ನಸ್ರೀನ್ (35) ಹಾಗೂ ಪುತ್ರಿಯರಾದ ಆಯೇಷಾ (16) ಮತ್ತು ಜೈನಾಬ್ (12) ಕಲ್ಲಂಗಡಿ ಹಣ್ಣನ್ನು ಸೇವಿಸಿದ್ದರು. ಹಣ್ಣು ತಿಂದ ಕೆಲವೇ ಗಂಟೆಗಳಲ್ಲಿ ವಾಂತಿ ಮತ್ತು ಅತಿಸಾರದಿಂದ ಅಸ್ವಸ್ಥಗೊಂಡ ಇವರು ಆಸ್ಪತ್ರೆಯಲ್ಲಿ ಒಬ್ಬರ ನಂತರ ಒಬ್ಬರಂತೆ ಸಾವನ್ನಪ್ಪಿದ್ದರು. ಅಂದು ರಾತ್ರಿ ಕುಟುಂಬದ ಇತರ ಸದಸ್ಯರು ಕೋಳಿ ಪುಲಾವ್ ಸೇವಿಸಿದ್ದರೂ, ಕಲ್ಲಂಗಡಿ ತಿಂದ ಈ ನಾಲ್ವರು ಮಾತ್ರ ಸಾವಿಗೀಡಾಗಿದ್ದು ರಹಸ್ಯವಾಗಿ ಉಳಿದಿತ್ತು.
ಕುಟುಂಬ ಸದಸ್ಯರು ಅತಿಯಾಗಿ ವಾಂತಿ ಮಾಡಿದ್ದರಿಂದ ದೇಹದಲ್ಲಿ ವಿಷದ ಅಂಶ ಪತ್ತೆಹಚ್ಚುವುದು ಕಠಿಣವಾಗಿತ್ತು. ಕಲಿನಾದ ವಿಧಿವಿಜ್ಞಾನ ಪ್ರಯೋಗಾಲಯವು ಬರೋಬ್ಬರಿ 54 ಬಾರಿ ವಿವಿಧ ಪರೀಕ್ಷೆಗಳನ್ನು ನಡೆಸಿದ ನಂತರ ವಿಷದ ಅಂಶವನ್ನು ದೃಢಪಡಿಸಿದೆ.
ಇದೀಗ ವಿಷ ಹೇಗೆ ಹಣ್ಣಿಗೆ ಸೇರಿತು ಎನ್ನವುದು ಪ್ರಮುಖ ಪ್ರಶ್ನೆಯಾಗಿದೆ. ಯಾಕಂದರೆ ಕಲ್ಲಂಗಡಿ ಹಣ್ಣಿನ ಹೊರಭಾಗದಲ್ಲಿ ಯಾವುದೇ ರೀತಿ ಕುರುಹು ಇರಲಿಲ್ಲ. ವಿಷವು ಹಣ್ಣಿನ ಒಳಗೇ ಇತ್ತು. ಇದನ್ನು ಇಂಜೆಕ್ಷನ್ ಮೂಲಕ ಹಾಕಿರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಲಿಪಾಶಾಣದಲ್ಲಿರುವ ಸತು ಫಾಸ್ಫೈಡ್ ಸೇವಿಸಿದಾಗ ದೇಹದೊಳಗೆ ಫಾಸ್ಫೈನ್ ಅನಿಲ ಬಿಡುಗಡೆಯಾಗುತ್ತದೆ. ಇದು ಶ್ವಾಸಕೋಶಕ್ಕೆ ಹಾನಿ ಮಾಡಿ ಆಮ್ಲಜನಕದ ಮಟ್ಟವನ್ನು ತೀವ್ರವಾಗಿ ಕುಸಿಯುವಂತೆ ಮಾಡುತ್ತದೆ. ಇದರಿಂದಾಗಿಯೇ ಕಿರಿಯ ಮಗು ಜೈನಾಬ್ ಮೊದಲು ಸಾವನ್ನಪ್ಪಿದ್ದಾಳೆ. ವಿಷವು ಹಣ್ಣಿನೊಳಗೆ ಹೇಗೆ ಬಂದಿತು ಎಂಬುದು ಈಗ ಪೊಲೀಸರಿಗೆ ದೊಡ್ಡ ಸವಾಲಾಗಿದೆ. ಇದು ಮಾರಾಟಗಾರರ ಕಡೆಯಿಂದ ಸಂಭವಿಸಿದ ಆಕಸ್ಮಿಕವೇ? ಅಥವಾ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಿದ ಕೊಲೆಯೇ? ಅಥವಾ ಆತ್ಮಹತ್ಯೆಯೇ? ಎಂಬ ಆಯಾಮಗಳಲ್ಲಿ ಜೆಜೆ ಮಾರ್ಗ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ದೋಕಾಡಿಯಾ ಮನೆಯಲ್ಲಿ ಇಲಿ ವಿಷದ ಯಾವುದೇ ಕುರುಹು ಸಿಗದಿರುವುದು ಸಂಚಿನ ಅನುಮಾನವನ್ನು ಹೆಚ್ಚಿಸಿದೆ.
“ನಾವು ವಿಧಿವಿಜ್ಞಾನ ವರದಿಯನ್ನು ಆಳವಾಗಿ ಅಧ್ಯಯನ ಮಾಡುತ್ತಿದ್ದೇವೆ. ಎಲ್ಲಾ ಕೋನಗಳಿಂದಲೂ ತನಿಖೆ ಮುಂದುವರಿಯಲಿದೆ,” ಎಂದು ಡಿಸಿಪಿ ಡಾ. ಪ್ರವೀಣ್ ಮುಂಧೆ ತಿಳಿಸಿದ್ದಾರೆ.