ಹೈದರಾಬಾದ್ ಡಿಸೆಂಬರ್ 18: ಸಿನೆಮಾವೊಂದರ ಪ್ರಚಾರಕ್ಕೆ ಬಂದಿದ್ದ, ನಟಿ ಜನರ ಗುಂಪಿನಲ್ಲಿ ಸಿಕ್ಕಿಹಾಕಿಕೊಂಡು ಕಿರುಕುಳ ಅನುಭವಿಸಿದ ಘಟನೆ ಹೈದರಾಬಾದ್ ನ ಲೂಲು ಮಾಲ್ ನಲ್ಲಿ ನಡೆದಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ.


ರಾಜಾಸಾಬ್ ಚಿತ್ರದ ಪ್ರಮೋಷನ್ ಈವೆಂಟ್ ಹೈದರಾಬಾದ್​ನ ಲೂಲು ಮಾಲ್​​ನಲ್ಲಿ ನಡೆದಿದೆ. ಈ ವೇಳೆ ಸಿನಿಮಾದ ನಿರ್ದೇಶಕ ಮಾರುತಿ ಹಾಗೂ ನಟಿ ನಿಧಿ ಭಾಗಿ ಆಗಿದ್ದರು. ಊಹಿಸಿದ್ದಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಅವರು ಈವೆಂಟ್ ಮುಗಿಸಿ ಬರುವಾಗ ಎಲ್ಲರೂ ಅವರನ್ನು ಮುತ್ತಿಕೊಂಡಿದ್ದಾರೆ. ಅವರ ದೇಹವನ್ನು ಟಚ್ ಮಾಡಲು ಕೆಲವರು ಪ್ರಯತ್ನಿಸಿದ್ದಾರೆ. ಇದರಿಂದ ಅವರಿಗೆ ಮುಜುಗರ ಆಗಿದೆ. ನಿಧಿಗೆ ಇದು ಕಿರುಕುಳದಂತೆ ಕಾಣಿಸಿದೆ.


ಬೌನ್ಸರ್​​ಗಳು ಶ್ರಮ ಹಾಕಿದರೂ ಜನರು ಮುತ್ತಿಕೊಳ್ಳೋದನ್ನು ತಡೆಯಲು ಸಾಧ್ಯವಾಗಲೇ ಇಲ್ಲ. ಕೊನೆಗೂ ಅವರು ಕಾರನ್ನು ಏರಿದ್ದಾರೆ. ಈ ವೇಳೆ ಅವರ ಡ್ರೆಸ್​ ಪರಿಸ್ಥಿತಿ ಕೂಡ ಹದಗೆಟ್ಟಿತ್ತು. ಕಾರಿನಲ್ಲಿ ಬಂದು ಕುಳಿತ ಬಳಿಕ ಅವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ಸಂದರ್ಭದ ವಿಡಿಯೋನ ವೈರಲ್ ಮಾಡಲಾಗುತ್ತಿದೆ. ನಟಿಯ ಜೊತೆ ಅಲ್ಲಿ ನೆರೆದಿದ್ದವರು ನಡೆದುಕೊಂಡಿದ್ದು ಸರಿ ಅಲ್ಲ ಎಂದಿದ್ದಾರೆ. ಇನ್ನೂ ಕೆಲವರು ನಿಜವಾದ ಅಭಿಮಾನಿಗಳು ಈ ರೀತಿ ಮಾಡೋದಿಲ್ಲ ಎನ್ನುತ್ತಿದ್ದಾರೆ.

Share Information