ವಿಜಯನಗರ, ಫೆಬ್ರವರಿ 1: ವಿಜಯನಗರದ ಕೊಟ್ಟೂರಿನಲ್ಲಿ ನಡೆದ ಭೀಕರ ಕೊಲೆ ಪ್ರಕರಣಕ್ಕೆ ಸಂಬಧಿಸಿದಂತೆ ಇದೀಗ ಆಘಾತಕಾರಿ ಸತ್ಯ ಹೊರಬಿದ್ದಿದ್ದು, ಪ್ರಕರಣದ ಪ್ರಮುಖ ಆರೋಪಿ ಅಕ್ಷಯ್, ತಂಗಿಯ ಪ್ರೇಮ ಪ್ರಕರಣ ಮತ್ತು ಆಕೆ ಗರ್ಭಿಣಿಯಾಗಿರುವುದು ತಿಳಿದು ಮರ್ಯಾದಾ ಹತ್ಯೆ ಮಾಡಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ತಂಗಿಗೆ ಬೆಂಬಲ ನೀಡಿದ ತಂದೆ, ತಾಯಿಯನ್ನೂ ಕೊಲೆ ಮಾಡಿದ್ದಾನೆ. ಪೊಲೀಸರ ವಿಚಾರಣೆ ವೇಳೆ ಬಾಯ್ಬಿಟ್ಟಿರುವ ಅಕ್ಷಯ್, ಇದು ಕೇವಲ ದ್ವೇಷದ ಕೊಲೆಯಲ್ಲ, ಕುಟುಂಬದ ಗೌರವ ಉಳಿಸಿಕೊಳ್ಳಲು ಮಾಡಿದ ಕೃತ್ಯ ಎಂದು ಹೇಳಿಕೊಂಡಿದ್ದಾನೆ.

ಕೊಟ್ಟೂರಿನ ನಿವಾಸಿ ಅಕ್ಷಯ್ ನ ಪಿಯುಸಿ ಓದುತ್ತಿದ್ದ ಅಕ್ಷಯ್ ತಂಗಿ ಅಮೃತಾ, ಅನ್ಯ ಕೋಮಿನ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಕಳೆದ ನಾಲ್ಕು ತಿಂಗಳ ಹಿಂದೆ ತಂಗಿಯ ಮೊಬೈಲ್ ಪರಿಶೀಲಿಸಿದಾಗ ಪ್ರೀತಿಯ ವಿಷಯ ಅಕ್ಷಯ್ಗೆ ತಿಳಿದಿತ್ತು. ಆಗ ಬುದ್ಧಿವಾದ ಹೇಳಿದ್ದ ಅಕ್ಷಯ್, ಆಕೆಯನ್ನು ಬೆದರಿಸಿದ್ದ. ಆದರೆ, ಜನವರಿ 26ರಂದು ತಾಯಿ, ‘ಅಮೃತಾ ಮೂರು ತಿಂಗಳ ಗರ್ಭಿಣಿ’ ಎಂಬ ಆಘಾತಕಾರಿ ವಿಷಯವನ್ನು ಮಗನಿಗೆ ತಿಳಿಸಿದ್ದರು. ಗರ್ಭಪಾತ ಮಾಡಿಸೋಣ ಎಂದು ಅಕ್ಷಯ್ ಹಠ ಹಿಡಿದಿದ್ದನಾದರೂ, ಪೋಷಕರು ಅದಕ್ಕೆ ಒಪ್ಪಿರಲಿಲ್ಲ. ‘ಊರವರ ಮುಂದೆ ಮರ್ಯಾದೆ ಹೋಗುತ್ತದೆ, ಇವರನ್ನು ಹೀಗೆ ಬಿಟ್ಟರೆ ನನಗೆ ಉಳಿಗಾಲವಿಲ್ಲ’ ಎಂದು ನಿರ್ಧರಿಸಿದ ಅಕ್ಷಯ್, ಇಡೀ ಕುಟುಂಬವನ್ನೇ ಮುಗಿಸಿದ್ದಾನೆ.
ಮೂರು ಕೊಲೆಗಳ ಬಳಿಕ ರಾತ್ರಿಯಿಡೀ ಟಿವಿ ನೋಡುತ್ತಾ, ತಪ್ಪಿಸಿಕೊಳ್ಳುವ ಮಾರ್ಗಗಳ ಬಗ್ಗೆ ಯೋಚಿಸಿದ್ದಾನೆ. ಬೆಳಗ್ಗೆ ತಾಯಿ ಹಾಗೂ ತಂಗಿಯ ಮೊಬೈಲ್ಗಳನ್ನು ತೆಗೆದುಕೊಂಡು ಬೆಂಗಳೂರಿಗೆ ಬಂದ ಅಕ್ಷಯ್ (ಆತನ ಮೊಬೈಲ್ ಮನೆಯಲ್ಲೇ ಬಿಟ್ಟುಬಂದಿದ್ದ), ಜಯದೇವ ಆಸ್ಪತ್ರೆ ಬಳಿ ಫೋಟೋ ತೆಗೆದು ತನ್ನ ಮೊಬೈಲ್ಗೆ ಕಳುಹಿಸಿದ್ದಾನೆ. ನಂತರ ಆ ಮೊಬೈಲ್ಗಳನ್ನು ಆಸ್ಪತ್ರೆ ಸಮೀಪದ ಡಸ್ಟ್ಬಿನ್ನಲ್ಲಿ ಎಸೆದಿದ್ದಾನೆ.
ಹತ್ಯೆಯ ನಂತರ ಅಕ್ಷಯ್, ತನ್ನ ಸೋದರಮಾವ ವಸಂತ್ನನ್ನು ಸಂಪರ್ಕಿಸಿದ್ದ. ಮಾವನ ಸಲಹೆಯಂತೆ ‘ಮಿಸ್ಸಿಂಗ್ ಡ್ರಾಮಾ’ ಸೃಷ್ಟಿಸಲು ಬೆಂಗಳೂರಿಗೆ ಬಂದಿದ್ದ. ತಂದೆಗೆ ಎದೆನೋವಿನ ಸಮಸ್ಯೆಯಿದ್ದ ಕಾರಣ, ಜಯದೇವ ಆಸ್ಪತ್ರೆಯ ಬಳಿ ಬಂದು ಫೋಟೋ ತೆಗೆದು, ಮೊಬೈಲ್ಗಳನ್ನು ಅಲ್ಲಿನ ಡಸ್ಟ್ಬಿನ್ಗೆ ಎಸೆದಿದ್ದ. ಬಳಿಕ ತಿಲಕನಗರ ಪೊಲೀಸ್ ಠಾಣೆಗೆ ಬಂದು ತಂದೆ, ತಾಯಿ, ತಂಗಿ ಕಾಣೆಯಾಗಿದ್ದಾರೆ ಎಂದು ದೂರು ನೀಡಿದ್ದ. ಆದರೆ, ಪೊಲೀಸರ ತೀವ್ರ ವಿಚಾರಣೆ ವೇಳೆ ಅಕ್ಷಯ್ ತಡಬಡಾಯಿಸಿದಾಗ ಅಸಲಿ ಸತ್ಯ ಹೊರಬಿದ್ದಿದೆ.
ಸದ್ಯ ಕೊಲೆ, ಸಾಕ್ಷಿ ನಾಶ ಸೇರಿದಂತೆ ಹಲವು ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತಿಲಕನಗರ ಪೊಲೀಸರು ಮಹಜರು ಪ್ರಕ್ರಿಯೆ ಪೂರ್ಣಗೊಳಿಸಿದ್ದಾರೆ. ಶೀಘ್ರವೇ ಪ್ರಕರಣವನ್ನು ಕೊಟ್ಟೂರು ಪೊಲೀಸರಿಗೆ ವರ್ಗಾವಣೆ ಮಾಡಲಾಗುತ್ತದೆ. ತಂಗಿ ನಿಜವಾಗಿಯೂ ಗರ್ಭಿಣಿಯಾಗಿದ್ದಳೇ ಎಂಬುದು ಮರಣೋತ್ತರ ಪರೀಕ್ಷೆ ವರದಿಯಿಂದ ತಿಳಿಯಬೇಕಿದೆ. ಆಕೆ ಅಪ್ರಾಪ್ತೆಯಾಗಿದ್ದರೆ ಆಕೆಯ ಪ್ರಿಯತಮನ ವಿರುದ್ಧವೂ ಫೋಕ್ಸೋ ಪ್ರಕರಣವೂ ದಾಖಲಾಗುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.